ಅಮಿತ್ ಶಾ ಮರುತನಿಖೆ ಅಗತ್ಯವಿಲ್ಲ: ಸುಪ್ರೀಂಕೋರ್ಟ್
ಹೊಸದಿಲ್ಲಿ, ಆ.1: ಗುಜರಾತ್‌ನ ಕ್ರಿಮಿನಲ್ ಸೊಹ್ರಾಬುದ್ದೀನ್ ಶೇಕ್ ಎನ್‌ಕೌಂಟರ್ ಪ್ರಕರಣದ ಸಂಬಂಧ ಬಿಜೆಪಿ ಅಧ್ಯಕ್ಷ ಅಮಿತ್ ಶಾರ ಮರು ತನಿಖೆಯನ್ನು ನಡೆಸುವ ಅಗತ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.
2005ರಲ್ಲಿ ಸೊಹ್ರಾಬುದ್ದೀನ್‌ನ ಸಾವಿಗೆ ಕಾರಣವಾದ ‘ನಕಲಿ ಎನ್‌ಕೌಂಟರ್’ ಗೆ ಆದೇಶ ನೀಡಿದ್ದರೆಂಬ ಆರೋಪದಿಂದ ಶಾ 2014ರಲ್ಲೇ ಆರೋಪ ಮುಕ್ತ ರಾಗಿದ್ದಾರೆ. ಅವರು ಗುಜರಾತ್‌ನ ಅಂದಿನ ಗೃಹಸಚಿವರಾಗಿದ್ದ ಕಾರಣ ಪೊಲೀಸರು ಅವರಿಗೆ ವರದಿ ಸಲ್ಲಿಸಿದ್ದರು. ಮುಂಬೈನ ನ್ಯಾಯಾಲಯವೊಂದು ಶಾ ವಿರುದ್ಧ ಯಾವುದೇ ಸಾಕ್ಷ ಇಲ್ಲವೆಂದು ತೀರ್ಪು ನೀಡಿತ್ತು ಹಾಗೂ ರಾಜಕೀಯ ಕಾರಣಗಳಿಗಾಗಿ ಅವರನ್ನು ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ತನಿಖೆಯಲ್ಲಿ ಸೇರಿಸಲಾಗಿತ್ತೆಂದು ಹೇಳಿತ್ತು.
ಶಾ ಪಾತ್ರದ ಕುರಿತು ಮರು ತನಿಖೆ ನಡೆಸುವಂತೆ ಮಾಜಿ ಅಧಿಕಾರಿ ಹರ್ಷ ಮಂದರ್ ಸುಪ್ರೀಂ ಕೋರ್ಟನ್ನು ಕೋರಿದ್ದರು. ಮಂದರ್ ಈ ಪ್ರಕರಣಕ್ಕೆ ಸ್ವಲ್ಪವೂ ಸಂಬಂಧಿಸಿದವರಲ್ಲ. ಒಮ್ಮೆ ಶಾರನ್ನು ದೋಷಮುಕ್ತಿಗೊಳಿಸಿದ ಮೇಲೆ ಅವರನ್ನು ಸತತವಾಗಿ ತನಿಖೆಗೊಳಪಡಿಸಲು ಸಾಧ್ಯವೇ ಎಂದು ನ್ಯಾಯಮೂರ್ತಿಗಳು ಇಂದು ಪ್ರಶ್ನಿಸಿದ್ದಾರೆ.
2012ರಲ್ಲಿ ಕೊಲೆ ಹಾಗೂ ಸಾಕ್ಷ ನಾಶದ ಆರೋಪದಲ್ಲಿ ಸಿಬಿಐ, ಶಾ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಗಳ ತನಿಖೆಯನ್ನು ಆರಂಭಿಸಿತ್ತು. ಸೊಹ್ರಾಬುದ್ದೀನ್ ಹಾಗೂ ಆತನ ಪತ್ನಿ ಕೌಸರ್‌ಬಿ ಎಂಬಾಕೆಯನ್ನು ಬಸ್ಸೊಂದರಿಂದ ಕೆಳಗಿಳಿಸಿ ಹತ್ಯೆ ಮಾಡ ಲಾಗಿತ್ತೆಂದು ತನಿಖಾ ಸಂಸ್ಥೆ ಆರೋಪಿಸಿತ್ತು. ಅಪರಾಧದ ಸಾಕ್ಷಿಯಾಗಿದ್ದ ತುಲಸೀರಾಂ ಪ್ರಜಾಪತಿಯನ್ನು ಒಂದು ವರ್ಷದ ಬಳಿಕ ಪೊಲೀಸರು ಕೊಂದಿದ್ದರೆಂದು ಅದು ಹೇಳಿತ್ತು.
................................
ಮೇ ತಿಂಗಳಲ್ಲಿ ಜಾಹೀರಾತಿಗಾಗಿ 35 ಕೋ.ರೂ.ಗೂ ಅಧಿಕ ಹಣ
ಮೋದಿ ಸರಕಾರದ ಸಾಧನೆ!
ಮುಂಬೈ,ಆ.1: ಮೋದಿ ಸರಕಾರವು ಕಳೆದ ಮೇ ತಿಂಗಳಲ್ಲಿ ತನ್ನ ಅಧಿಕಾರದ ಎರಡು ವರ್ಷಗಳನ್ನು ಪೂರೈಸಿದ ಬಳಿಕ ತನ್ನ ಸಾಧನೆಗಳ ಪ್ರಚಾರಕ್ಕಾಗಿ ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತುಗಳಿಗಾಗಿ 35.58 ಕೋ.ರೂ.ಗಳನ್ನು ವ್ಯಯಿಸಿದೆ ಎನ್ನುವುದನ್ನು ಆರ್‌ಟಿಐ ವಿಚಾರಣೆಯು ಬಹಿರಂಗಗೊಳಿಸಿದೆ.
ಆರ್‌ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಅವರು ಕೇಂದ್ರದ ಮೋದಿ ನೇತೃತ್ವದ ಸರಕಾರವು 2016,ಮೇ 26ರಂದು ತನ್ನ ಎರಡು ವರ್ಷಗಳ ಅಧಿಕಾರ ಪೂರೈಸಿದ ಸಂದರ್ಭದಲ್ಲಿ ರಾಷ್ಟ್ರಾದ್ಯಂತ ಪ್ರಮುಖ ವೃತ್ತಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಲು ಮಾಡಿದ್ದ ಖರ್ಚಿನ ವಿವರವನ್ನು ಕೋರಿದ್ದರು.
ಪ್ರಾದೇಶಿಕ ಭಾಷೆಗಳು ಸೇರಿದಂತೆ 11,236 ವೃತ್ತಪತ್ರಿಕೆಗಳಿಗೆ ನೀಡಲಾಗಿದ್ದ ಜಾಹೀರಾತುಗಳ ಕುರಿತು ವಿವರಗಳನ್ನು ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ(ಡಿಎವಿಪಿ)ದ ಸಾರ್ವಜನಿಕ ಮಾಹಿತಿ ಅಧಿಕಾರಿ ರೂಪಾ ವೇದಿ ಅವರು ಒದಗಿಸಿದ್ದಾರೆ.
ಗಲಗಲಿ ಅವರು ಪ್ರತ್ಯೇಕ ಅರ್ಜಿಯಲ್ಲಿ ಮನಮೋಹನ ಸಿಂಗ್ ಸರಕಾರವು ಎರಡು ವರ್ಷಗಳ ಅಧಿಕಾರವನ್ನು ಪೂರೈಸಿದಾಗ ಮಾಡಿದ್ದ ಜಾಹೀರಾತು ವೆಚ್ಚಗಳ ವಿವರವನ್ನು ಸಹ ಕೋರಿದ್ದು,ಅಂತಹ ಯಾವುದೇ ವೆಚ್ಚವನ್ನು ಮಾಡಲಾಗಿರಲಿಲ್ಲ ಎಂದು ವೇದಿ ಉತ್ತರಿಸಿದ್ದಾರೆ.