ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪಿಕಪ್ ಚಾಲಕ ಅಶ್ರಫ್

Update: 2016-08-02 12:32 GMT

ಬಂಟ್ವಾಳ, ಆ.2: ಕಳೆದುಹೋದ ಬೆಲೆಬಾಳುವ ವಸ್ತುಗಳಿದ್ದ ಎರಡು ಬ್ಯಾಗ್‌ಗಳನ್ನು ಅದರ ವಾರಸುದಾರನಿಗೆ ಹಿಂದಿರುಗಿಸುವ ಮೂಲಕ ಮಾಣಿಯ ಪಿಕಪ್ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ಮಾಣಿಯಲ್ಲಿ ಸೋಮವಾರ ನಡೆದಿದೆ.

ಊಟಿಗೆ ಪ್ರವಾಸಕ್ಕೆ ತೆರಳಿದ್ದ ಮಂಗಳೂರಿನ ಪ್ರವಾಸಿಯೊಬ್ಬರು ಸರಕಾರಿ ಬಸ್ಸಿನಲ್ಲಿ ವಾಪಸ್ ಊರಿಗೆ ಮರಳುತ್ತಿದ್ದ ವೇಳೆ ಸಾವಿರಾರು ರೂ. ಬೆಲೆಬಾಳುವ ವಸ್ತುಗಳನ್ನೂಳಗೊಂಡ ಅವರ ಎರಡು ಬ್ಯಾಗ್‌ಗಳು ಮಾಣಿ ಸಮೀಪದ ಮಿತ್ತೂರು ಎಂಬಲ್ಲಿ ಬಸ್ಸಿನಿಂದ ರಸ್ತೆಗೆ ಬಿದ್ದಿದ್ದವು. ಮಾಣಿಯ ಪಿಕಪ್ ಚಾಲಕನ ಅಶ್ರಪ್ ಮನೋಹರ್ ಎಂಬವರು ಇದೇ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಎರಡು ಬ್ಯಾಗ್‌ಗಳು ಅವರ ಕಣ್ಣಿಗೆ ಬಿದ್ದಿದೆ. ಬಳಿಕ ಅವರು ಅದನ್ನು ಅವರ ಸಹೋದರ ಹನೀಫ್ ಅವರಲ್ಲಿ ಕೊಟ್ಟು ತೆರಳಿದ್ದರು.

ಹನೀಫ್ ಅವರು ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಇನ್ನೊಂದು ಬಸ್ಸಿನ ನಿರ್ವಾಹಕನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಆ ಚಾಲಕನ ಪ್ರಯತ್ನದಿಂದ ಬ್ಯಾಗ್‌ಗಳ ವಾರಸುದಾರ ಪತ್ತೆಯಾಗಿದ್ದಾರೆ. ಬಳಿಕ ವಾರಸುದಾರ ಮಾಣಿಗೆ ಬಂದು ಅಶ್ರಫ್‌ರಿಂದ ಬ್ಯಾಗ್ ಪಡೆದುಕೊಂಡಿದ್ದಾರೆ. ಅಶ್ರಫ್‌ರ ಪ್ರಾಮಾಣಿಕತೆಯನ್ನು ಮೆಚ್ಚಿದ ಬ್ಯಾಗ್‌ನ ವಾರಸುದಾರರು, ಅವರಿಗೆ ಊಡುಗೊರೆ ನೀಡಿ ಗೌರವಿಸಿದ್ದಾರೆ.

ಶ್ರಫ್ ಹಲವಾರು ವರ್ಷಗಳಿಂದ ಮಾಣಿಯಲ್ಲಿ ಪಿಕಪ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಈ ಪರಿಸರದಲ್ಲಿ ಅಪಘಾತ ಮೊದಲಾದ ಘಟನೆಗಳು ನಡೆದಾಗ ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಅವರ ಸಹಾಯಕ್ಕೆ ಧಾವಿಸಿ ಸೇವೆ ಮಾಡುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೀಗ ಮತ್ತೊಮ್ಮೆ ಪ್ರಾಮಾಣಿಕತೆ ಮೆರೆದ ಅವರ ಸೇವಾ ಮನೋಭಾವಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News