ಪ್ರವಾಸಿ ವಾಹನಗಳನ್ನು ನಿಲ್ಲಿಸಲು ಯತ್ನ: ಮೂವರು ಪೊಲೀಸರ ವಶಕ್ಕೆ

Update: 2016-08-02 12:40 GMT

ಬಂಟ್ವಾಳ, ಜು. 2: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಿಸುವ ಪ್ರವಾಸಿಗರ ವಾಹನಗಳನ್ನು ನಿಲ್ಲಿಸಲು ಯತ್ನಿಸುತ್ತಿದ್ದ ಬಗ್ಗೆ ಠಾಣೆಗೆ ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ವಿಟ್ಲ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಸೋಮವಾರ ಬೆಳಗ್ಗಿನ ಜಾವ ಕಲ್ಲಡ್ಕ - ಕಾಂಞಂಗಾಡು ಹೆದ್ದಾರಿಯ ಮೈರದಲ್ಲಿ ನಡೆದಿದೆ.

ಪುಣಚ ತೋರಣಕಟ್ಟೆ ನಿವಾಸಿ ಲೋಕೇಶ್ ಪೂಜಾರಿ(28), ಮಂಗಿಲಪದವು ಮಚ್ಚೆ ನಿವಾಸಿ ಮನೋಜ್ ಕುಮಾರ್(26) ಬಂಧಿತ ಆರೋಪಿಗಳು.

ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಅಳಿಕೆ ನಿವಾಸಿ ಗುರುರಾಜ್ ಬಲ್ಲಾಳ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ. ರವಿವಾರ ತಡ ರಾತ್ರಿ ಕೆಂಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಕೇಪು ಗ್ರಾಮದ ಮೈರ ಎಂಬಲ್ಲಿ ಮೂವರು ಪ್ರವಾಸಿ ವಾಹನವನ್ನು ನಿಲ್ಲಿಸಲು ಹವಣಿಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆಗೆಂದು ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಆರೋಪಿಗಳಲ್ಲಿ ಮೆಣಸಿನ ಹುಡಿ, ಕಬ್ಬಿಣದ ರಾಡ್ ಹೊಂದಿರುವುದು ಪತ್ತೆಯಾದ್ದರಿಂದ ವಶಕ್ಕೆ ಪಡೆದಿದ್ದಾರೆ.

ಬೆಳಗ್ಗಿನ ಜಾವ ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆ ನಡೆಸುವ ಉದ್ದೇಶದಿಂದ ಲಾಕಪ್‌ನಲ್ಲಿರಿಸಿದ್ದರು. ಬೇರೊಂದು ವಿಚಾರದಲ್ಲಿ ಠಾಣೆಗೆ ಬಂದ ವಿಟ್ಲ ಸಮೀಪದ ವಕೀಲರೊಬ್ಬರು ಆರೋಪಿಗಳ ಪರವಾಗಿ ಸಂಘಟನೆಗಳ ಹೆಸರುಗಳನ್ನು ಹೇಳಿಕೊಂಡು ಮಾತಿಗಿಳಿದಿದ್ದಾರೆ. ಇದರ ಜೊತೆಗೆ ಲಾಕಪ್‌ನಲ್ಲಿದ್ದ ಆರೋಪಿಗಳಿಗೆ ಪ್ಯಾಂಟ್ - ಶರ್ಟ್ ನೀಡಿದ್ದಾರೆ ಎನ್ನಲಾಗಿದೆ. ತಡೆಯಲು ಹೋದ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದೂ ಅಲ್ಲದೆ ನ್ಯಾಯಾಲಯದಲ್ಲಿ ಖಾಸಗಿ ಕೇಸ್ ದಾಖಲಿಸಿ ಎಲ್ಲರಿಗೆ ಪಾಠ ಕಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News