ಕನ್ಯಾನ: ದುಷ್ಕರ್ಮಿಗಳಿಂದ ಸರಕಾರಿ ಶಾಲೆಯ ಸೊತ್ತುಗಳಿಗೆ ಹಾನಿ

Update: 2016-08-02 12:46 GMT

ಬಂಟ್ವಾಳ, ಆ. 2: ಶಾಲೆಯ ಅಕ್ಷರ ದಾಸೋಹ ಕೊಠಡಿಯ ಕಿಟಕಿಯ ಗಾಜು, ನೀರಿನ ಪೈಪು, ಸಿಂಟೆಕ್ಸ್ ಟ್ಯಾಂಕ್ ಹಾಗೂ ಬಾಗಿಲುಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ ಘಟನೆ ಕನ್ಯಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ದುಷ್ಕರ್ಮಿಗಳು ಶಾಲೆಯ ಎರಡು ಕುಡಿಯುವ ನೀರಿನ ಸಿಂಟೆಕ್ಸ್ ಟ್ಯಾಂಕ್, ಶೌಚಾಲಯದ ಬಾಗಿಲುಗಳನ್ನು ಹಾರೆಯಿಂದ ಹಾನಿಗೊಳಿಸಿದರೆ 10 ನೀರಿನ ನಲ್ಲಿಗಳನ್ನು ಹಾಗೂ ಶೌಚಾಲಯದ ವಿವಿಧ ಕಡೆಗಳಲ್ಲಿ ಅಳವಡಿಸಲಾಗಿದ್ದ ಪೈಪುಗಳನ್ನು ತೂತು ಮಾಡಿ ನಾಶಗೊಳಿಸಿದ್ದಾರೆ. ಹೊಸದಾಗಿ ನಿರ್ಮಾಣವಾಗಿರುವ ಅಕ್ಷರ ದಾಸೋಹ ಕೊಠಡಿಯ 4 ದೊಡ್ಡ ಗಾಜುಗಳನ್ನು ಕಲ್ಲು ಎಸೆದು ಹಾನಿಗೊಳಿಸಿದರೆ ಶೌಚಾಲಯದ ಬೇಸಿನ್‌ಗಳ ಮೇಲೆ ಕಲ್ಲುಗಳನ್ನು ಎಸೆದು ಹಾನಿಗೊಳಿಸಲು ಯತ್ನಿಸಿದ್ದಾರೆ. ಇದರಿಂದ ಶಾಲೆಗೆ ಒಂದು ಲಕ್ಷ ರೂ.ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಈ ಶಾಲೆಯು ಶತಮಾನೋತ್ಸವ ಕಾರ್ಯಕ್ರಮವನ್ನು ಈ ಹಿಂದೆ ಆಚರಿಸಿತ್ತು. ಕೆಲವು ಸಮಯಗಳ ಹಿಂದೆ ಇಲಾಖೆಯ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ನೂತನ ಅನ್ನಪೂರ್ಣ ಅಕ್ಷರ ದಾಸೋಹ ಕಟ್ಟಡವನ್ನು ನಿರ್ಮಿಸಲಾಗಿದೆ. ಅದನ್ನು ಜಿಲ್ಲಾ ಉಸ್ತುವಾರಿ ಬಿ.ರಮಾನಾಥ ರೈ ಉದ್ಘಾಟನೆ ಮಾಡಿ ಚಾಲನೆ ನೀಡಿದ್ದರು. ಸೋಮವಾರ ಬೆಳಗ್ಗೆ ಶಾಲೆಯ ಸಿಬ್ಬಂದಿ ಶಾಲೆಗೆ ಆಗಮಿಸಿದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಅವರು ಮುಖ್ಯೋಪಾಧ್ಯಾಯರಿಗೆ ಹಾಗೂ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್, ಕನ್ಯಾನ ಗ್ರಾಪಂ ಅಧ್ಯಕ್ಷೆ ದೇವಕಿ, ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ರಹ್ಮಾನ್, ಕನ್ಯಾನ ಸರಕಾರಿ ಪದವಿಪೂರ್ವ ಕಾಲೇಜಿನ ಕಾರ್ಯಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಪೊಯ್ಯಗದ್ದೆ, ಕನ್ಯಾನ ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿಜಯಶಂಕರ ಆಳ್ವ, ಗ್ರಾಪಂ ಸದಸ್ಯರು ಭೇಟಿ ನೀಡಿದ್ದಾರೆ.

ಈ ಬಗ್ಗೆ ಶಾಲಾ ಪ್ರಬಾರ ಮುಖ್ಯೋಪಾಧ್ಯಾಯ ಸೂರ್ಯನಾರಾಯಣ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ರಾಧಾಕೃಷ್ಣ ಕೆ. ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ಕನ್ಯಾನ ಸೂಕ್ಷ್ಮ ಪ್ರದೇಶವಾಗಿದ್ದು, ಅಗಾಗ ಇಲ್ಲಿ ಅಹಿತಕರ ಘಟನೆ ನಡೆಯುತ್ತಿತ್ತು. ಇದೀಗ ಈ ಘಟನೆ ನಡೆದಿದ್ದರಿಂದ ಜನರು ಆತಂಕದಲ್ಲಿದ್ದಾರೆ. ಕಳವು ಮಾಡುವ ಉದ್ದೇಶದಿಂದ ಈ ಕೃತ್ಯ ನಡೆಯಲಿಲ್ಲ ಎಂಬುದು ಮೇಲ್ನೊಟಕ್ಕೆ ಕಂಡು ಬರುತ್ತಿದೆ. ಆದರೆ ಇದೊಂದು ವಿಘ್ನ ಸಂತೋಷಿಗಳ ಕೃತ್ಯ ಅಥವಾ ಕುಡಿತದ ಅಮಲಿನಲ್ಲಿ ಈ ಕೃತ್ಯ ನಡೆಸಿಬಹುದೆಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News