×
Ad

ದಲಿತರ ಮೇಲಿನ ದೌರ್ಜನ್ಯ ವಿರುದ್ಧ ಪ್ರತಿಭಟನೆ

Update: 2016-08-02 19:47 IST

ಮಂಗಳೂರು, ಆ.2: ಕಳೆದ ಎರಡೂವರೆ ವರ್ಷಗಳಲ್ಲಿ ದೇಶದ ಮೂಲೆ ಮೂಲೆಯಲ್ಲಿ ದಲಿತರ ಮೇಲೆ ದಾಳಿ, ದೌರ್ಜನ್ಯ, ಕೊಲೆಗಳು ನಡೆಯುತ್ತಿರುವುದರ ವಿರುದ್ಧ ದಲಿತ ಹಕ್ಕುಗಳ ದ.ಕ. ಜಿಲ್ಲಾ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಗುಜರಾತ್‌ನಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿರುವುದನ್ನು ಖಂಡಿಸಿ ದಿಲ್ಲಿಯ ಜಂತರ್ ಮಂಥರ್ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಕಾರರ ಮೇಲೆ ಹಲ್ಲೆಗೆ ಯತ್ನಿಸಿ, ಹಾಕಿದ್ದ ಟೆಂಟ್‌ಗಳನ್ನು ಕಿತ್ತುಹಾಕಿ ದೌರ್ಜನ್ಯ ಎಸಗಿರುವುದರನ್ನು ಹಾಗೂ ಅಹ್ಮದಾಬಾದ್‌ನಲ್ಲಿ ಸಂಘ ಪರಿವಾರದ ಗೂಂಡಾಗಳು ದಬೋಲಿ ಪ್ರದೇಶದ ದಲಿತ ಯುವಕ ಮಹೇಂದ್ರ ಮಕ್ವಾನ ಎಂಬವನ ಮೇಲೆ ಹಲ್ಲೆ ನಡೆಸಿ, ಜೂಜು ಆಡುತ್ತಿದ್ದ ಎಂಬ ಪಟ್ಟ ಕಟ್ಟಿ, ಪೊಲೀಸರಿಂದ ಬಂಧನಕ್ಕೊಳಪಡಿಸಿ, ಸೂರತ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎನ್.ಎಸ್.ಪಟೇಲ್ ಎಂಬ ಪೊಲೀಸ್ ಅಧಿಕಾರಿ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಚುನಾವಣೆಯಲ್ಲಿ ಆಯ್ಕೆಯಾಗಿ ರಾಜ್ಯದ ಆಡಳಿತ ನಡೆಸಿದ ಮಾಯಾವತಿಯವರ ಬಗ್ಗೆ ಅವಹೇಳನಕಾರಿ ಬಹಿರಂಗ ಹೇಳಿಕೆ ನೀಡಿರುವ ಉತ್ತರಪ್ರದೇಶದ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ದಲಿತ ಹಕ್ಕುಗಳ ಸಮಿತಿ ಒತ್ತಾಯಿಸಿತು. ಅಲ್ಲದೆ ಉತ್ತರ ಪ್ರದೇಶದ ಕಾನ್ಪುರ ಮೈನ್ಪುರಿ ಎಂಬಲ್ಲಿ ದಿನಸಿ ಅಂಗಡಿಯಲ್ಲಿ 15 ರೂ. ಸಾಲ ಮಾಡಿದ್ದನ್ನು ನೆಪವನ್ನಾಗಿ ಇಟ್ಟುಕೊಂಡು ಭರತ್ ಮತ್ತು ಆತನ ಪತ್ನಿ ಮಮತಾರನ್ನು ಬರ್ಬರವಾಗಿ ಕೊಡಲಿಯಿಂದ ಕಡಿದು ಕೊಲೆ ಮಾಡಲಾಗಿದ್ದು, ಆರೋಪಿ ಅಶೋಕ್ ಮಿಶ್ರಾನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಂಘಟನೆಯು ಒತ್ತಾಯಿಸಿದೆ.

ಕಳೆದ ಕೆಲವೇ ತಿಂಗಳುಗಳ ಹಿಂದೆ ಅಮೃತ್‌ಪುರ ಜಿಲ್ಲೆಯಲ್ಲಿ ಸಾಯಿಬಾಬಾ ಮಂದಿರಕ್ಕೆ ದಲಿತರು ಗರ್ಭಗುಡಿಯ ಬಳಿ ದ್ವಾರದೊಳಗೆ ಹೋದರೆಂಬ ಕಾರಣಕ್ಕೆ ಹಾಡುಹಗಲೇ ಕೊಡಲಿಯಿಂದ ಕಡಿದು ಕೊಲೆ, ಹರಿಯಾಣದ ಸೋನ್‌ಪೇಡ್‌ನಲ್ಲಿ ಜಾಗದ ತಕರಾರಿನ ಮೇಲೆ ಜಗಳವಾಡಿ ರಾತ್ರಿ ಮಲಗಿರುವಾಗ ಮನೆಗೆ ಸೀಮೆಎಣ್ಣೆ ಸುರಿದು ಬೆಂಕಿ ಇಟ್ಟು, ಸಮಾಜದಲ್ಲಿ ಬಾಳಿ ಬದುಕಬೇಕಾಗಿದ್ದ ಹಸುಗೂಸನ್ನು ಸುಟ್ಟ ಘಟನೆ, ಕರ್ನಾಟಕದ ಹಾಸನ ಜಿಲ್ಲೆ, ಶಿಗರನ ಹಳ್ಳಿಯಲ್ಲಿ ದಲಿತ ಮಹಿಳೆ ದೇವಸ್ಥಾನ ಪ್ರವೇಶ ಮಾಡಿದರೆಂಬ ವಿಚಾರಕ್ಕೆ ಊರಿಂದ ಬಹಿಷ್ಕಾರ, ಮರಕುಂಬಿ ಕೊಪ್ಪಳ ಜಿಲ್ಲೆಯಲ್ಲಿ ಕ್ಷೌರ ಮಾಡಲು ಹೋದ ದಲಿತನ ಮೇಲೆ ಹಲ್ಲೆ, ಚಿಕ್ಕಮಗಳೂರಿನ ಕೊಪ್ಪ ತಾಲೂಕು ಬಾಳೆಹೊನ್ನೂರಿನಲ್ಲಿ ದಿನವಿಡೀ ಕಾಫಿ ತೋಟದಲ್ಲಿ ದುಡಿದು ಅಲ್ಪ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದ ದಲಿತ ಕುಟುಂಬಗಳು ದನದ ಮಾಂಸ ತಿಂದರೆಂಬ ಕಾರಣಕ್ಕೆ ಹಲ್ಲೆ ಮೊದಲಾದ ಘಟನೆಗಳು ದೇಶದ ಮೂಲೆಮೂಲೆಯಲ್ಲಿ ಮರುಕಳಿಸುತ್ತಿದೆ. ಬಿಜೆಪಿ ಸಂಘಪರಿವಾರದ ಗೋರಕ್ಷಕರೆಂಬ ಹಣೆಪಟ್ಟಿ ಕಟ್ಟಿಕೊಂಡು ದಲಿತರ ಮೇಲೆ, ಅಲ್ಪ ಸಂಖ್ಯಾತರ ಮೇಲೆ ನಿರಂತರ ದಾಳಿ ನಡೆಸುತ್ತಿದ್ದರೂ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದಲಿತರನ್ನು ರಕ್ಷಿಸುವ ಕುರಿತು ಮಾತನಾಡಿಲ್ಲ. ಇನ್ನೊಂದೆಡೆ ಅಪರಾಧಿಗಳನ್ನು ಆಯಾ ರಾಜ್ಯದ ಜನಪ್ರತಿನಿಧಿಗಳು ಸಮರ್ಥಿಸಿಕೊಂಡು, ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯ ಅಪಾಯಕಾರಿ ಹೇಳಿಕೆಗಳು ದಲಿತರು, ಅಲ್ಪಸಂಖ್ಯಾತರ ಮೇಲೆ ಇನ್ನಷ್ಟು ದಾಳಿ, ಕೊಲೆಗಳು ನಡೆಸಲು ಕುಮ್ಮಕ್ಕು ನೀಡುವಂತಿದೆ. ದಲಿತರು, ಅಲ್ಪಸಂಖ್ಯಾತರ ಮೇಲೆ ದಾಳಿ, ಕೊಲೆ ನಡೆಸುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಕೇಂದ್ರ ಸರಕಾರ ಮುಂದಾಗಬೇಕೆಂದು ದಲಿತ ಹಕ್ಕುಗಳ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ.

 ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ನಾಗೇಂದ್ರ ಉರ್ವಸ್ಟೋರ್, ರಘುವೀರ್, ಕುಮಾರ್ ಸುರತ್ಕಲ್, ಜಗನ್ನಾಥ್ ಸುರತ್ಕಲ್, ಕೃಷ್ಣ ತಣ್ಣೀರುಬಾವಿ, ಗೀತಾ ದಡ್ಡಲ್‌ಕಾಡು, ಬಬಿತಾ ಹೊಸಬೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News