ಉದ್ಯಾವರ: ಅರಣ್ಯ ಇಲಾಖೆಯಿಂದ ಶಾಲಾ ಜಾಗ ಸ್ವಾಧೀನ ಯತ್ನ; ಪಂಚಾಯತ್‌ನಿಂದ ತಡೆ
ಕುಂಜತ್ತೂರು, ಆ.2: ಅರಣ್ಯ ಇಲಾಖೆಯವರು ಉದ್ಯಾವರ ಗುಡ್ಡೆ ಹೈಸ್ಕೂಲ್ ಸಮೀಪವಿರುವ ಪಂಚಾಯತ್‌ನ ಪುರಂಬೋಕು ಸ್ಥಳದಲ್ಲಿ ಬಂಡೆಕಲ್ಲನ್ನು ಇಟ್ಟು, ಸ್ಥಳವನ್ನು ಸ್ವಾಧೀನಪಡಿಸಲು ಯತ್ನಿಸಿದೆ ಎನ್ನುವ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.
ಉದ್ಯಾವರ ಗುಡ್ಡೆ ಮಾನಿಂಜ ಬಯಲು ರಸ್ತೆ 1972 -73 ರಲ್ಲಿ ಸಿಎಸ್‌ಆರ್‌ಇ ಯೋಜನೆಯಲ್ಲಿ ಮಂಜೇಶ್ವರ ಗ್ರಾ.ಪಂ. ವತಿಯಿಂದ 8 ಮೀಟರ್ ಅಗಲದ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ಸಂದರ್ಭ ಮಂಜೇಶ್ವರ ಗ್ರಾ.ಪಂ. 1972ರಲ್ಲಿ ಉದ್ಯಾವರ ಶಾಲೆ ಕಟ್ಟಡವನ್ನು ಕಟ್ಟಲು ಅನುಮತಿಯನ್ನು ಕೂಡಾ ನೀಡಿತ್ತು. ಇದರಂತೆ ಇಲ್ಲಿ ಶಾಲೆ ಕೂಡಾ ಆರಂಭಗೊಂಡಿತ್ತು. ಮಂಜೇಶ್ವರ ಗ್ರಾ.ಪಂ.1976ರಲ್ಲಿ ಸೋಶಿಯಲ್ ಫಾರೆಸ್ಟ್‌ನವರಿಗೆ ಸಸಿಗಳನ್ನು ನೆಡಲು ಅನುಮತಿ ನೀಡಿತ್ತು. ಇದೀಗ ಅರಣ್ಯ ಇಲಾಖೆ ರವಿವಾರ ಈ ಪರಿಸರಕ್ಕೆ ಆಗಮಿಸಿ ಶಾಲೆಗೆ ಹೋಗುವ ರಸ್ತೆಯ ಚರಂಡಿಯಲ್ಲಿ ಸುಮಾರು ನಾಲ್ಕು ಫೀಟ್ ಎತ್ತರದಲ್ಲಿ ಬಂಡೆಕಲ್ಲನ್ನು ಕಟ್ಟಿ ಶಾಲಾ ಪರಿಸರದ ಸ್ಥಳವನ್ನು ಸ್ವಾಧೀನಪಡಿಸಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ.
ಆಕ್ರೋಶಿತ ಸ್ಥಳೀಯರು ಸೋಮವಾರ ಮಂಜೇಶ್ವರ ಗ್ರಾ.ಪಂ.ಗೆ ಮಾಹಿತಿ ನೀಡಿದರು. ಇದರಂತೆ ಸ್ಥಳಕ್ಕಾಗಮಿಸಿದ ಪಂಚಾಯತ್ ಕಾರ್ಯದರ್ಶಿ ಹಾಗೂ ಅಧ್ಯಕ್ಷರು ಸ್ಥಳವನ್ನು ಪರಿಶೀಲಿಸಿ ಅದು ಪಂಚಾಯತ್‌ನ ಸ್ಥಳವೆಂಬುದನ್ನು ದೃಢೀಕರಿಸಿದ ಬಳಿಕ ಅರಣ್ಯ ಇಲಾಖೆಗೆ ತಾತ್ಕಾಲಿಕ ತಡೆ ನೀಡಿದ್ದಾರೆ. ಇದೀಗ ಬಂಡೆ ಕಲ್ಲು ಕಟ್ಟಿರುವುದು ವಾಹನ ಸಂಚಾರಕ್ಕೆ ಸಮಸ್ಯೆಯನ್ನು ಸೃಷ್ಟಿಸಿರುವುದಾಗಿ ನಾಗರಿಕರು ಆರೋಪಿಸಿದ್ದಾರೆ. ಶಾಲೆಯ ಸ್ಥಳವನ್ನು ಅತಿಕ್ರಮಿಸಲು ಬಂದರೆ ಯಾವುದೇ ಬೆಲೆ ತೆತ್ತಾದರೂ ಅದನ್ನು ಎದುರಿಸುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ ಎನ್ನಲಾಗಿದೆ.