×
Ad

ಮಂಗಳೂರಿನ ರಿಚರ್ಡ್ ರಾಜಸ್ಥಾನದಲ್ಲಿ ಅಪಹರಣ

Update: 2016-08-02 20:59 IST

ಮಂಗಳೂರು, ಆ.2: ಮೋಸದ ಜಾಲಕ್ಕೆ ಸಿಲುಕಿದ ಮಂಗಳೂರಿನ ಉದ್ಯಮಿಯೋರ್ವರು ಸಚಿವ ಯು.ಟಿ. ಖಾದರ್ ಅವರ ಸಕಾಲಿಕ ಸಹಕಾರದಿಂದ ಅಪಾಯದಿಂದ ಪಾರಾದ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಮಂಗಳೂರಿನ ಬೋಂದೆಲ್ನ ಅರುಣ್ ಡಿಸೋಜಾ ಮತ್ತು ರಿಚಡರ್ ಮೇರಿಯನ್ ಮಂಗಳೂರಿನ ಬಿಜೈನಲ್ಲಿ ಕಿರ್ಲೋಸ್ಕರ್ ಕಂಪೆನಿಯ ಡೀಲರ್‌ಗಳಾಗಿದ್ದು, ನಗರದ ಬಿಜೈನಲ್ಲಿ ಕಿರ್ಲೋಸ್ಕರ್ ಮಳಿಗೆಯನ್ನು ಹೊಂದಿದ್ದಾರೆ. ಈ ಪೈಕಿ ಸುಳ್ಳು ಕರೆಯನ್ನು ನಂಬಿ ರಾಜಸ್ಥಾನಕ್ಕೆ ತೆರಳಿ ಅಪಹರಣಕ್ಕೊಳಗಾಗಿದ್ದ ರಿಚರ್ಡ್ ಇದೀಗ ಸುರಕ್ಷಿತವಾಗಿ ವಾಪಸಾಗುತ್ತಿದ್ದಾರೆ.

ರಾಜಸ್ಥಾನದ ಭರತ್ಪುರದಲ್ಲಿ ಕಡಿಮೆ ಬೆಲೆಗೆ 4 ಜನರೇಟರ್ ಇದೆಯೆಂದು ಅರುಣ್ ಡಿಸೋಜ ಅವರಿಗೆ ಅಪರಿಚಿತ ಕರೆಯೊಂದು ಬಂದಿತ್ತು. ಇಂಟರ್‌ನೆಟ್ ಮೂಲಕ ನಂಬರ್ ಪಡೆದಿದ್ದ ವ್ಯಕ್ತಿಯೋರ್ವ ಅರುಣ್‌ರಿಗೆ ಕರೆ ಮಾಡಿದ್ದ. ಕಳೆದ 2 ತಿಂಗಳಿಂದ ಇವರ ಮಧ್ಯೆ ವ್ಯವಹಾರದ ಮಾತುಕತೆ ಕೂಡಾ ನಡೆಯುತ್ತಿತ್ತು. ಕರೆ ಮಾಡಿದ್ದ ವ್ಯಕ್ತಿಯ ಮಾತುಗಳನ್ನು ನಂಬಿದ್ದ ಅರುಣ್, ರಿಚರ್ಡ್ ಮೇರಿಯನ್ ಲಾಝರತ್ರನ್ನು ಜುಲೈ 28ರಂದು ರಾಜಸ್ಥಾನಕ್ಕೆ ತೆರಳಿ ಜನರೇಟರ್ ನೋಡಿಕೊಂಡು ಬರುವಂತೆ ಕಳುಹಿಸಿಕೊಟ್ಟಿದ್ದರು ಎನ್ನಲಾಗಿದೆ.

ಜುಲೈ 30 ರಂದು ರಾಜಸ್ಥಾನದ ಭರತ್ಪುರವನ್ನು ತಲುಪಿದ್ದ ರಿಚರ್ಡ್‌ರನ್ನು ಜನರೇಟರ್ ಕೊಡುತ್ತೇನೆಂದು ಹೇಳಿದ ವ್ಯಕ್ತಿಯು ಪಿಕಪ್ ವಾಹನವೊಂದರಲ್ಲಿ ಕರೆದುಕೊಂಡು ಹೋಗಿದ್ದ. ಬಳಿಕ ಅಲ್ಲಿಂದ ಅರುಣ್ ಅವರಿಗೆ ಕರೆ ಮಾಡಿದ್ದ ರಾಜಸ್ಥಾನದ ತಂಡ, ರಿಚರ್ಡ್‌ರನ್ನು ಜೀವಂತವಾಗಿ ಬಿಡಬೇಕಾದರೆ ಹತ್ತು ಲಕ್ಷ ರೂ. ನೀಡಬೇಕೆಂದು ಬೇಡಿಕೆ ಇಟ್ಟಿತ್ತು ಎನ್ನಲಾಗಿದೆ.

ಅಪಹರಣಕಾರರ ಮಾತಿನಿಂದ ಕಂಗಾಲಾದ ಅರುಣ್ ಈ ವಿಚಾರವನ್ನು ಮಂಗಳೂರು ಯುವಕಾಂಗ್ರೆಸ್ನ ಕಾರ್ಯದರ್ಶಿ ಪ್ರಕಾಶ್ ಪಿಂಟೋ ಕೆರೆಬೈಲ್ ಮತ್ತು ಪವನ್ ರಾಜ್ ಕೊಲ್ಯ ಇವರ ಮುಖಾಂತರ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಯು.ಟಿ. ಖಾದರ್ರಿಗೆ ತಿಳಿಸಿದ್ದರು. ಅರುಣ್‌ರ ಬೇಡಿಕೆಗೆ ಸ್ಪಂದಿಸಿದ ಸಚಿವರು ಮಂಗಳೂರು ಕಮಿಷನರ್ಗೆ ವಿಷಯದ ಗಂಭೀರತೆಯನ್ನು ತಿಳಿಸಿದ್ದು, ರಾಜಸ್ಥಾನದ ಭರತ್ಪುರ ಪ್ರಾಂತ್ಯದ ಐಜಿ ಅಲೋಕ್ ವಸಿಷ್ಠರ ಜೊತೆ ಕೂಡಾ ಮಾತನಾಡಿ ರಿಚರ್ಡ್‌ರನ್ನು ಸುರಕ್ಷಿತವಾಗಿ ಅಪಹರಣಕಾರರಿಂದ ಬಿಡುಗಡೆಗೊಳಿಸುವಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು.

ಕಮಿಷನರ್ ಸೂಚನೆಯಂತೆ ಮಂಗಳೂರಿನಿಂದ ಪ್ರಕಾಶ್ ಪಿಂಟೊ, ಪವನ್ ರಾಜ್ ಜೊತೆಗೆ ಉಳ್ಳಾಲ ಪೊಲೀಸ್ ಠಾಣೆ ಎಎಸ್ಸೈ ವಿಜಯರಾಜ್ ಹಾಗೂ ಕಂಕನಾಡಿ ಠಾಣಾ ಹೆಡ್ಕಾನ್ಸ್ಟೇಬಲ್ ಮೋಹನ್ ಎಲ್ ತಂಡ ಭರತ್ಪುರಕ್ಕೆ ಪ್ರಯಾಣ ಬೆಳೆಸಿದ್ದು, ಆ.1ರಂದು ಮಧ್ಯರಾತ್ರಿ ಅಲ್ಲಿಗೆ ತಲುಪಿತ್ತು. ಬಳಿಕ ಅಲ್ಲಿನ ಅಲ್ಲಿನ ಐಜಿಯವರ ಸಹಕಾರದಲ್ಲಿ ‘ಡೀಗ್‘ ಪ್ರಾಂತ್ಯದ ಪೊಲೀಸರ ಸಹಕಾರದಿಂದ ರಿಚರ್ಡ್‌ರ ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿದಾಗ ಅದು ರಾಜಸ್ಥಾನ-ಉತ್ತರಪ್ರದೇಶದ ಗಡಿಪ್ರದೇಶ ‘ಬಸ್ತಾನ‘ ಎಂಬ ಪ್ರದೇಶವನ್ನು ಸೂಚಿಸುತ್ತಿತ್ತು. ಅಪಹರಣಕ್ಕೊಳಗಾದ ರಿಚರ್ಡ್‌ರನ್ನು ಹುಡುಕಿಕೊಂಡು 95 ಶೇ. ಕುಖ್ಯಾತ ದರೋಡೆಕೋರರದ್ದೇ ಬಾಹುಳ್ಯವಿರುವ ವಲಯಕ್ಕೆ ತೆರಳಿದ ಪೊಲೀಸರ ತಂಡ ಅಲ್ಲಿನ ಕುಖ್ಯಾತ ಆರೋಪಿ ಇಜಾಝ್ ನೇತೃತ್ವದ ಮೂವರನ್ನು ಬಂಧಿಸಿತಾದರೂ, ಅವರ ಕಸ್ಟಡಿಯಲ್ಲಿ ರಿಚರ್ಡ್ ಇರಲಿಲ್ಲ. ಈ ಸಂದರ್ಭ ಗ್ಯಾಂಗ್ ನಿಂದ 8 ಬೈಕ್ಗಳು, ಬಂದೂಕು, ಗಾಂಜಾ ಮೊದಲಾದವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮುಬಾರಿಕ್ ಗ್ಯಾಂಗ್ನ್ನು ಬಂಧಿಸಿದ ವಿಚಾರ ತಿಳಿದ ರಿಚರ್ಡ್‌ರನ್ನು ಅಹರಿಸಿದ್ದ ತಂಡ, ರಿಚರ್ಡ್‌ರನ್ನು ಗೋವರ್ಧನ್ ಎಂಬ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದೆ. ಮೂರುದಿನಗಳ ಕಾಲ ಗದ್ದೆಯಲ್ಲಿ ಕಟ್ಟಿ ಹಾಕಿ, ಹಲ್ಲೆ ನಡೆಸಲಾಗಿದೆ. ಗ್ಯಾಂಗ್ನಲ್ಲಿ ಸುಮಾರು 12 ಮಂದಿ ಇದ್ದು, 6 ಮಂದಿ ನನಗೆ ಕಾವಲಾಗಿದ್ದರು ಎಂದು ರಿಚಡರ್ ಮಾಹಿತಿ ನೀಡಿದ್ದಾರೆ.

ಅಪಹರಣಕಾರರ ಪತ್ತೆಗೆ ಪೊಲೀಸರು ಬಲೆಬೀಸಿದ್ದು, ಶೀಘ್ರ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಕೃತಜ್ಞತೆಗಳು

ಸಚಿವ ಯು.ಟಿ. ಖಾದರ್ ಅವರಲ್ಲಿ ಈ ಬಗ್ಗೆ ನಾವು ತಿಳಿಸಿದಾಗ ಅವರೆಲ್ಲಾ ತುರ್ತು ಕಾರ್ಯವನ್ನು ಬದಿಗೊತ್ತಿ ಕ್ಷಿಪ್ರ ಪರಿಹಾರ ಕಂಡು ಹುಡುಕುವಲ್ಲಿ ನಮ್ಮ ಜೊತೆ ಮಗ್ನರಾದ ಪರಿಣಾಮ ರಿಚರ್ಡ್ ಜೀವಂತವಾಗಿ ನಮ್ಮ ಕೈಸೇರಿದ್ದಾರೆ. ನಮ್ಮ ಅತಂತ್ರ ಸ್ಥಿತಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಸಚಿವ ಯು.ಟಿ. ಖಾದರ್, ಮಂಗಳೂರು ಕಮಿಷನರ್ ಎಂ. ಚಂದ್ರಶೇಖರ್, ಡಿಸಿಪಿ ಶಾಂತರಾಜ್, ಎಸಿಪಿ ಕುಮಾರಿ ಶೃತಿ. ಕೆ. ಪೊಲೀಸರು ಹಾಗೂ ಭರತ್ ಪುರದ ಐಜಿ ಯವರಿಗೆ ಕೃತಜ್ಞತೆಗಳು ಎಂದು ಭರತ್ ಪುರದಲ್ಲಿರುವ ಪ್ರಕಾಶ್ ಪಿಂಟೋ ಕೆರೆಬೈಲ್ ದೂರವಾಣಿ ಮೂಲಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News