ಕೊಣಾಜೆ: ಆಡಿಡೊಂಜಿ ಕೂಟ ಹಾಗೂ ಮಹಿಳಾ ವಿಚಾರಗೋಷ್ಠಿ
ಕೊಣಾಜೆ, ಆ.2: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶಾರದಾ ಜ್ಞಾನ ವಿಕಾಸ ಕೇಂದ್ರ ಹಾಗೂ ಪ್ರಗತಿಬಂಧು ಒಕ್ಕೂಟದ ಆಶ್ರಯದಲ್ಲಿ ಕೊಣಾಜೆಯ ಯುಬಿಎಂಸಿ ಶಾಲೆಯಲ್ಲಿ ಆಟಿಡೊಂಜಿ ಕೂಟ, ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಕೊಣಾಜೆ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ಸುದರ್ಶನ ಭಟ್, ನಾವು ನಮ್ಮ ಪೂರ್ವಜರ ಕಾಲದಿಂದಲೂ ಇದ್ದ ಆಚರಣೆ, ಸಂಪ್ರದಾಯಗಳನ್ನು ಇಂದು ಮರೆಯುತ್ತಿದ್ದೇವೆ. ಆದರೆ ಅವರು ಆಚರಿಸುತ್ತಿದ್ದ ಸಂಪ್ರದಾಯಗಳು ಬದುಕಿಗೆ ಪೂರಕವಾಗಿದ್ದವು. ಹಿಂದಿನ ಕಾಲದ ಆಚರಣೆ, ಸಂಪ್ರದಾಯ, ಕೃಷಿ ಪದ್ದತಿ, ಗ್ರಾಮೀಣ ಸಂಸ್ಕೃತಿಯ ಪರಿಕಲ್ಪನೆಗಳನ್ನು ಇಂದಿನ ಯುವ ಜನಾಂಗವೂ ಅರಿತುಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಹಿಂದೆ ಎಲ್ಲ ರೀತಿಯ ರೋಗ ರುಜಿನಗಳಿಗೂ ಮನೆ ಪರಿಸರದಲ್ಲಿ ಸಿಗುತ್ತಿದ್ದ ಔಷಧೀಯ ಸಸ್ಯಗಳಿಂದಲೇ ಮದ್ದನ್ನು ಪೂರ್ವಜರು ಕಂಡುಕೊಂಡಿದ್ದರು. ಅಲ್ಲದೆ ದೇಹಕ್ಕೆ ಆರೋಗ್ಯ ವರ್ಧಕ ಪೌಷ್ಟಿಕಾಂಶಗಳುಳ್ಳ ನುಗ್ಗೆ ಸೊಪ್ಪು, ತಜಂಕ್, ತಿಮರೆ ಮುಂತಾದ ಸೊಪ್ಪುಗಳನ್ನು ಉಪಯೋಗಿಸುತ್ತಿದ್ದರು. ಆದರೆ, ಇಂದಿನ ಕಾಲದ ಹೆಚ್ಚಿನ ಜನರಿಗೆ ಇದರ ಪರಿಚಯವೇ ಇಲ್ಲದಾಗಿದೆ. ಆದ್ದರಿಂದ ಇಂತಹ ಕಾರ್ಯಕ್ರಮದ ಮೂಲಕ ಹಿಂದಿನ ಸಮಾಜದ ಆಹಾರ ಪದ್ದತಿ, ಆಚರಣೆಗಳನ್ನು ಅರಿತುಕೊಳ್ಳಲು ಸಾಧ್ಯ ಎಂದು ಹೇಳಿದರು.
ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬಾಗವಹಿಸಿ ಮಾತನಾಡಿದ ಮಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಬಿತಾ, ಹಿಂದಿನ ಕಾಲದಲ್ಲಿ ಮಹಿಳೆಯರು ಸ್ವಾತಂತ್ರ್ಯವಿಲ್ಲದೆ ನಾಲ್ಕು ಗೋಡೆಗಳ ಮದ್ಯೆ ಬಂಧಿಯಾಗಿರಬೇಕಿತ್ತು. ಆದರೆ ಇಂದು ಕಾಲ ಬದಲಾಗಿದ್ದು, ಮಹಿಳೆಯರು ನಾನಾ ರೀತಿಯ ಉನ್ನತ ಮಟ್ಟದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸ್ಥಳೀಯ ಸಾಂಸ್ಕೃತಿಕ ಆಚರಣೆಗಳು ಆಯಾ ಪ್ರದೇಶದ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಆದ್ದರಿಂದ ಆಟಿಡೊಂಜಿ ಕೂಟದಂತಹ ಕಾರ್ಯಕ್ರಮಗಳು ಇಂದಿಗೆ ಪ್ರಸ್ತುತವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಯೋಜನೆಯ ವಲಯಾಧ್ಯಕ್ಷೆ ಭವ್ಯಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಆಲಿ, ವಲಯಾಧ್ಯಕ್ಷ ರಾಜೇಶ್ ಆಚಾರ್ಯ, ಪಂಚಾಯತ್ ಸದಸ್ಯ ಅಚ್ಯುತ ಗಟ್ಟಿ, ಜಯಂತಿ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.
ಶಾರದಾ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಚಂದ್ರಮೋಹಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಮೇಲ್ವೀಚಾರಕಿ ರೇಷ್ಮಾ ವಂದಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ನೌಷಾದ್ ಕಾರ್ಯಕ್ರಮ ನಿರೂಪಿಸಿದರು.