ಬಂಟ್ವಾಳ: ವಿಷಯುಕ್ತ ಮರದ ಕಷಾಯ ಕುಡಿದು ತಂದೆ, ಮಕ್ಕಳು ಅಸ್ವಸ್ಥ

Update: 2016-08-02 16:25 GMT

ಬಂಟ್ವಾಳ, ಆ.2: ವಿಷಯುಕ್ತ ಮರದ ತೊಗಟೆಯಿಂದ ತಯಾರಿಸಿದ ಕಷಾಯ ಕುಡಿದ ಪರಿಣಾಮ ತಂದೆ, ಮಕ್ಕಳಿಬ್ಬರು ಅಸ್ವಸ್ಥಗೊಂಡ ಘಟನೆ ತಾಲೂಕಿನ ಪಂಜಿಕಲ್ಲು ಗ್ರಾಮದ ಕೇಂದೋಡಿ ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಇಲ್ಲಿನ ನಿವಾಸಿ ವಸಂತ ಪೂಜಾರಿ(48), ಅವರ ಮಕ್ಕಳಾದ ಅಶ್ವಿತಾ(17), ಅನ್ವಿತಾ(14) ಅಸ್ವಸ್ಥಗೊಂಡವರು. ಈ ಮೂವರು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಟಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ವಸಂತ ಪೂಜಾರಿಯವರ ಪತ್ನಿ ಪುಷ್ಯಾವತಿ ಇಂದು ಬೆಳಗ್ಗೆ ಮನೆ ಸಮೀಪದಲ್ಲಿದ್ದ ವಿಷಯುಕ್ತವಾದ ಕನ್ನಂಪಾಲೆ ಮರವನ್ನು ಪಾಲೆಮರ ಎಂದು ತಪ್ಪಾಗಿ ತಿಳಿದು ಅದರ ತೊಗಟೆಯನ್ನು ತಂದು ಕಷಾಯ ಮಾಡಿದ್ದರು. ಇದನ್ನು ಕುಡಿದ ಪತಿ, ಇಬ್ಬರು ಮಕ್ಕಳಿಗೆ ವಾಂತಿಯಾಗಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ತುಂಬೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಅಸ್ವಸ್ಥಗೊಂಡ ತಂದೆ, ಮಕ್ಕಳಿಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News