ತೊಕ್ಕೊಟ್ಟು: ಹಜ್ ಯಾತ್ರಿಕರಿಗೆ ತರಬೇತಿ ಕಾರ್ಯಕ್ರಮ
ಉಳ್ಳಾಲ, ಆ.2: ಮನಸ್ಸು ಶುದ್ಧಿಯಾಗಿರದೆ ಮಕ್ಕಾ, ಮದೀನಾ ಅಥವಾ ಎಲ್ಲೇ ಹೋಗಿ ಪ್ರಾರ್ಥಿಸಿದರೂ ಹಜ್ ಕರ್ಮ ಪೂರ್ತಿಯಾಗದು, ಆದ್ದರಿಂದ ಎಲ್ಲದಕ್ಕಿಂತ ಮುನ್ನ ನಾವು ನಮ್ಮ ಮನಸ್ಸನ್ನು ಪರಿಶುದ್ದವಾಗಿಟ್ಟುಕೊಳ್ಳಬೇಕು ಎಂದು ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ತಿಳಿಸಿದರು.
ಮಂಜನಾಡಿ ವಲಯ ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್ ಆಶ್ರಯದಲ್ಲಿ ಮಂಗಳವಾರ ತೊಕ್ಕೊಟ್ಟು ಕಲ್ಲಾಪುವಿನ ಯುನಿಟಿ ಸಭಾಂಗಣದಲ್ಲಿ ನಡೆದ ಹಜ್ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. ಇಸ್ಲಾಂನ ಐದು ಕಡ್ಡಾಯ ಕರ್ಮಗಳಲ್ಲಿ ಹಜ್ ನಿರ್ವಹಣೆಯೂ ಒಂದಾಗಿದೆ. ಹಜ್ ನಿರ್ವಹಿಸುವವರು ಎಲ್ಲಾ ರೀತಿಯ ಸಾಲದಿಂದ ಮುಕ್ತವಾಗಿರಬೇಕು, ಯಾರೊಂದಿಗೂ ದ್ವೇಷ, ಅಸೂಯೆ ಹೊಂದಿರಬಾರದು. ಕಿಂಚಿತ್ ಲೋಪವಿದ್ದರೂ ಹಜ್ ಕರ್ಮ ನಿಷ್ಪ್ರಯೋಜಕ ಎಂದು ಹೇಳಿದರು.
ಶಿಬಿರ ಉದ್ಘಾಟಿಸಿದ ಸಚಿವ ಯು.ಟಿ.ಖಾದರ್ ಮಾತನಾಡಿ, ತಮ್ಮ ಬದುಕಿನಲ್ಲಿ ಹಜ್ ನಿರ್ವಹಿಸಬೇಕು ಎನ್ನುವ ಅಭಿಲಾಷೆ ಮುಸಲ್ಮಾನರ ಮನದಲ್ಲಿರುತ್ತದೆ. ಯಾತ್ರಾರ್ಥಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಸರಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಬಾರಿ ಹಜ್‌ಗೆ ಹೋದವರು ಬಲಿಷ್ಟ, ಸೌಹಾರ್ದ ದೇಶ, ನಾಡು ನಿರ್ಮಾಣಕ್ಕಾಗಿ ಪ್ರಾರ್ಥಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್, ಉದ್ಯಮಿ ಕುಂಞಿ ಅಹ್ಮದ್ ಹಾಜಿ ಮುಖ್ಯ ಅತಿಥಿಗಳಾಗಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್‌ನ ಉಪಾಧ್ಯಕ್ಷ ಟಿ.ಎಸ್.ಇಸ್ಮಾಯೀಲ್, ಟಿ.ಎಸ್.ಅಬ್ದುಲ್ಲಾ, ಕೋಶಾಧಿಕಾರಿ ಕತಾರ್ ಬಾವ ಹಾಜಿ, ಕಾರ್ಯದರ್ಶಿಗಳಾದ ಮುಹಮ್ಮದ್ ಮಾಸ್ಟರ್, ಎಂ.ಇ.ಮೊಯ್ದೀನ್ ಕುಂಞಿ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಆಲಿಕುಂಞಿ ಪಾರೆ ಸ್ವಾಗತಿಸಿದರು. ಉಪಾಧ್ಯಕ್ಷ ಹೈದರ್ ಪರ್ತಿಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.