ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ಆಟಿ ಅಮಾವಾಸ್ಯೆ ದಿನಾಚರಣೆ
ಕಡಬ, ಆ.2:ಅಧುನಿಕ ಸಂಕೀರ್ಣ ಜೀವನ ಪದ್ಧತಿಯಲ್ಲಿ ಬೆಲೆ ಕಳೆದುಕೊಳ್ಳುತ್ತಿರುವ ತುಳುನಾಡ ಭವ್ಯ ಸಂಸ್ಕಾರ, ಸಂಸ್ಕೃತಿ ಆಚರಣೆಗಳ ವೈಜ್ಞಾನಿಕ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಿ ಅದನ್ನು ಉಳಿಸಿ ಬೆಳೆಸುವ ಕರ್ತವ್ಯ ತುಳುವರಲ್ಲ್ಲಿದೆ ಎಂದು ನಿವೃತ್ತ ತಹಶೀಲ್ದಾರ್ ಮೋಹನ್ ರಾವ್ ಹೇಳಿದರು.
ಅವರು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮಂಗಳೂರು ಪ್ರಾಯೋಜಕತ್ವದಲ್ಲಿ ಮಂಗಳವಾರ ನಡೆದ 10ನೆ ವರ್ಷದ ಆಟಿ ಅಮಾವಾಸ್ಯೆಯ ದಿನಾಚರಣೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಾರಿದ್ರದ ಆಟಿ ತಿಂಗಳಿನಲ್ಲಿ ನಮ್ಮ ಹಿರಿಯರು ನೈಸರ್ಗಿಕ ಸ್ವಾದಿಷ್ಟ ಆಹಾರ ಸೇವಸಿ ನಿರೋಗಿಗಳಾಗಿದ್ದರು. ಹಾಳೆ ಮರದ ಕಷಾಯಕ್ಕೆ ವೈಜ್ಞಾನಿಕ ಹಿನ್ನೆಲೆಯಿದೆ. ಯುವ ಸಮೂಹಕ್ಕೆ ತುಳುವ ಆಚರಣೆ ಕಟ್ಟು ಪಾಡುಗಳನ್ನು ಮನದಟ್ಟು ಮಾಡುವ ಕಾರ್ಯ ನಮ್ಮ ಹಿರಿಯರಿಂದಾಗಬೇಕು. ಆಗ ಮಾತ್ರ ತುಳುವ ಸಂಸ್ಕಾರ, ಸಂಸ್ಕೃತಿ ಉಳಿಸಬಹುದು ಎಂದರು.
ಎತ್ತಿನಹೊಳೆ ಹೋರಾಟ ಸಮಿತಿ ಸಂಚಾಲಕ, ಉಪ್ಪಿನಂಗಡಿಯ ವೈದ್ಯ ಡಾ. ನಿರಂಜನ ರೈ ಮಾತನಾಡಿ, ಜಾನಪದ ಸಂಸ್ಕೃತಿಯನ್ನು ಹೊಂದಿದ ಕರಾವಳಿಯಲ್ಲಿ ಆಟಿ ತಿಂಗಳಲ್ಲಿ ವಿಶಿಷ್ಟ ಆಚರಣೆಗಳಿವೆ. ತುಳುನಾಡಿನ ಸಂಸ್ಕೃತಿಗೆ ಅದರದ್ದೇ ಆದ ಮಹತ್ವವಿದೆ. ನಮ್ಮ ಸಂಸ್ಕೃತಿಯನ್ನು ಅರಿತುಕೊಂಡು ಪ್ರಚಾರಪಡಿಸುವ ಕಾರ್ಯವಾಗಬೇಕು ಎಂದರು.
ನಿವೃತ್ತ ಶಿಕ್ಷಕ ಗೋಪಾಲ ಶೆಟ್ಟಿ ಕಳೆಂಜ ಮಾತನಾಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ತಾಲೂಕು ಪಂಚಾಯತ್ ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸತೀಶ್ ಭಟ್ ಉಪಸ್ಥಿತರಿದ್ದರು.
ಹಿರಿಯ ಜ್ಯೋತಿಷ್ಯ ಭಾಗ್ಯಚಂದ್ರ ರಾವ್, ದೈವಪಾತ್ರಿ ಹರಿಯಪ್ಪ ನೇಜಿಕಾರು, ನಾಟಿ ವೈದ್ಯೆ ಚಂದ್ರಾವತಿ ಶಿವಾರು, ಜನಪದ ಗುಡಿ ಕೈಗಾರಿಕೆ ಮುದರ ಆಲಂಕಾರು ಇವರನ್ನು ಸನ್ಮಾನಿಸಲಾಯಿತು.
48 ಬಗೆಯ ವಿಶಿಷ್ಟ ಖಾದ್ಯಗಳ ತಯಾರಿಗೆ ಪೂರಕ ವಸ್ತುಗಳನ್ನು ಒದಗಿಸಿದ ವಿದ್ಯಾರ್ಥಿಗಳಾದ ವಿಘ್ನೇಶ್ ಮಲ್ಯ, ಶ್ರವಣ್ ದೀಪ್, ಶರಣ್ಯ, ಯಶಸ್ವಿನಿಯವರನ್ನು ಗೌರವಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಶೇಸಪ್ಪ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾರ ಮುಖ್ಯಗುರು ರಾಧಕೃಷ್ಣ ಸ್ವಾಗತಿಸಿ, ನಿಲಯ ಪಾಲಕ ರಮೇಶ್ ರೈ ವಂದಿಸಿದರು. ಶಿಕ್ಷಕಿ ಸರಿತಾ ಕಾರ್ಯಕ್ರಮ ನಿರೂಪಿಸಿದರು.