ಫ್ರಾನ್ಸ್: 20 ಮಸೀದಿಗಳನ್ನುಮುಚ್ಚಿದ ಸರಕಾರ
ಪ್ಯಾರಿಸ್,ಆಗಸ್ಟ್ 3: ಫ್ರಾನ್ಸ್‌ನಲ್ಲಿ ಇಪ್ಪತ್ತರಷ್ಟು ಮಸೀದಿಗಳನ್ನು ಅಲ್ಲಿನ ಸರಕಾರ ಮುಚ್ಚಿದೆ ಎಂದು ತಿಳಿದು ಬಂದಿದೆ. ರಾಷ್ಟ್ರದ ಮೌಲ್ಯಕ್ಕೆವಿರುದ್ಧ ಹಾಗೂ ಭಯೋತ್ಪಾದನೆಗೆ ಪ್ರೋತ್ಸಾಹಕವಾದ ಧಾರ್ಮಿಕ ಭಾಷಣ ನೀಡಿದ್ದಾರೆ ಎನ್ನಲಾದ ಎಂಬತ್ತು ಇಮಾಮರುಗಳನ್ನು ಹೊರಹಾಕಲು ಸರಕಾರ ನಿರ್ಧರಿಸಿದೆ ಎಂದು ಫ್ರೆಂಚ್ ವಿದೇಶ ಸಚಿವ ಬರ್ನಾಡ್ ಕಾಸ್ನೋವ್ ಹೇಳಿದ್ದಾರೆ ಎಂದು ವರದಿಯಾಗಿದೆ. ಇಮಾಮರಿಗೆ ತರಬೇತಿ ನೀಡುವುದನ್ನು ಫ್ರೆಂಚ್ ಸರಕಾರ ಪ್ರಾರಂಭಿಸಲಿದ್ದು ಭಯೋತ್ಪಾದನೆ ಪ್ರೋತ್ಸಾಹ ನೀಡುವ ಇಮಾಮರನ್ನು ಹೊರಗೆ ಹಾಕಲಾಗುವುದು ಅಂತಹ ಮಸೀದಿಗಳನ್ನು ಮುಚ್ಚುವ ಸರಕಾರದ ನೀತಿಯನ್ನು ಮುಂದುವರಿಸಲಾಗುವುದು ಎಂದು ತನ್ನನ್ನು ಭೇಟಿಯಾದ ಫ್ರೆಂಚ್ ಕೌನ್ಸಿಲ್ ಆಫ್ ದ ಮುಸ್ಲಿಂ ಫೆಯಿತ್ ಪ್ರತಿನಿಧಿಗಳೊಂದಿಗೆ ಕಾಸ್ನೋವ್ ಹೇಳಿದ್ದಾರೆಂದು ವರದಿಯಾಗಿದೆ.
ಜಾತ್ಯತೀತ ಮೌಲ್ಯಗಳನ್ನು ಸಂಪೂರ್ಣವಾಗಿ ಪಾಲಿಸುವುದರೊಂದಿಗೆ ಮಸೀದಿಗೆ ಹಣಕಾಸು ನೆರವು ನೀಡಿ ಸುಧಾರಣೆ ತರಲಾಗುವುದು ಹಾಗೂ ಇಮಾಮರಿಗೆ ’ಮಧ್ಯಮ ಇಸ್ಲಾಮ್’ನ ಆಶಯಗಳನ್ನು ಪರಿಚಯಿಸುವ ತರಬೇತಿ ನೀಡಲು ಸರಕಾರ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ನಡುವೆ ಫ್ರೆಂಚ್ ಕೌನ್ಸಿಲ್ ಆಫ್ ದ ಮುಸ್ಲಿಂ ಫೆಯಿತ್ ಇಮಾಮರಿಗೆ ತರಬೇತಿ ನೀಡಲು ಮುಂದೆ ಬಂದಿದೆ. ಜೊತೆಗೆ ಇಂಟರ್‌ನೆಟ್‌ಮೂಲಕ ಸಶಸ್ತ್ರ ಹೋರಾಟಕ್ಕೆ ಕರೆ ನೀಡುವುದನ್ನು ವಿರೋಧಿಸುತ್ತೇವೆ ಎಂದು ಫ್ರೆಂಚ್ ಕೌನ್ಸಿಲ್ ಆಫ್ ದ ಮುಸ್ಲಿಂ ಫೆಯಿತ್ ಅಧ್ಯಕ್ಷರಾದ ಅನ್ವರ್ ಕಬೀಬ್ಶ್ ಹೇಳಿದ್ದಾರೆ."ಫ್ರೆಂಚ್ ಜಾತ್ಯತೀತ ಇತಿಹಾಸ" ಅರ್ಥ ಮಾಡಿಕೊಳ್ಳುವುದಕ್ಕಾಗಿ ಸರಕಾರ ನೀಡುವ ತರಬೇತಿಕಾರ್ಯಕ್ರಮದಲ್ಲಿ ಮುಸ್ಲಿಮರು ಭಾಗವಹಿಸಬೇಕೆಂದು ಅವರು ಕರೆ ನೀಡಿದ್ದಾರೆಂದು ವರದಿ ತಿಳಿಸಿದೆ.