ಶೀಘ್ರವೇ ಆರೋಪಿಗಳ ಬಂಧನ: ಕಮಿಷನರ್ ಎಂ.ಚಂದ್ರಶೇಖರ್
ಮಂಗಳೂರು,ಆ.3:ರಾಜಾಸ್ಥಾನದಲ್ಲಿ ಅಪಹರಣಕ್ಕೊಳಗಾದ ರಿಚರ್ಡ್ ಮೇರಿಯನ್ ಲಾಝರತ್ ಅವರನ್ನು ಅಪಹರಿಸಿದ ತಂಡದ ಬಗ್ಗೆ ಮಾಹಿತಿ ಸಿಕ್ಕಿದ್ದು ಅವರನ್ನು ಶೀಘ್ರದಲ್ಲಿಯೆ ಬಂಧಿಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮೀಷನರ್ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನದ ಭರತ್‌ಪುರದಲ್ಲಿ ಕಡಿಮೆ ಹಣಕ್ಕೆ 4 ಜನರೇಟರ್ ಇದೆ ಎಂದು ಅರುಣ್ ಡಿಸೋಜ ರಿಗೆ ಅಪರಿಚಿತ ವ್ಯಕ್ತಿಯೊಬ್ಬರಿಂದ ಕರೆ ಬಂದಿತ್ತು. ಇದನ್ನು ನಂಬಿದ ಅರುಣ್ ಜುಲೈ 28ರಂದು ರಿಚರ್ಡ್ ಮೇರಿಯನ್ ಲಾಝರತ್‌ರನ್ನು ಹಣ ನೀಡದೆ ಜನರೇಟರ್‌ನ್ನು ನೋಡಿಬರುವಂತೆ ರಾಜಸ್ಥಾನಕ್ಕೆ ಕಳುಹಿಸಿದ್ದರು. ಜುಲೈ 30ರಂದು ರಾಜಸ್ಥಾನ ಭರತ್‌ಪುರ ತಲುಪಿದ ರಿಚರ್ಡ್‌ರನ್ನು ವ್ಯಕ್ತಿಯೊಬ್ಬ ಜನರೇಟರ್ ಕೊಡು ವುದಾಗಿ ಹೇಳಿ ಭರತ್‌ಪುರದಿಂದ ವಾಹನದಲ್ಲಿ ಕರೆದು ಕೊಂಡು ಹೋಗಿ ಅರುಣ್‌ಗೆ ಫೋನ್ ಮಾಡಿ ಅಪರಿಚಿತ ವ್ಯಕ್ತಿ ಮತ್ತು ಆತನ ತಂಡ ರಿಚರ್ಡ್‌ನ್ನು ಜೀವಂತ ಬಿಡಬೇಕಾದರೆ 10ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿತ್ತು.
ಈ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆಯ ಎಎಸ್‌ಐ ವಿಜಯರಾಜು, ಹೆಡ್‌ಕಾನ್ಸ್‌ಟೇಬಲ್ ಮೋಹನ್ ಅವರನ್ನು ಭರತ್‌ಪುರಕ್ಕೆ ಕಳುಹಿಸಲಾಯಿತು. ಭರತ್‌ಪುರ ಐಜಿ ಅಲೋಕ್ ವಶಿಷ್ಟ, ಭರತ್ ಪುರ ಎಸ್‌ಪಿ ಕೈಲಾಸ್ ವಿಷ್ಣೋಯಿ, ಮಥುರಾ ಐಜಿ ದುರ್ಗಾಚರಣ್ ಮಿಶ್ರ ಮತ್ತು ಮಥುರ ಎಸ್‌ಎಸ್‌ಪಿ ಬಬ್ಲೂಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಲಾಗಿದ್ದು ಅಪಹರಣಕ್ಕೋಳಗಾದ ರಿಚರ್ಡ್ ಮೇರಿಯನ್ ಲಾಝರತ್‌ರನ್ನು ರಕ್ಷಿಸಲಾಯಿತು ಎಂದು ತಿಳಿಸಿದರು. ಅಪಹರಣಕಾರರು 7 ಕಡೆ ಸ್ಥಳವನ್ನು ಬದಲಾಯಿಸಿದ್ದು ಪೊಲೀಸರು ಮುಬಾರಕ್ ಗ್ಯಾಂಗ್‌ನ್ನು ಹಿಡಿದಾಗ ಅಪಹರಣ ಮಾಡಿರುವ ಆರೋಪಿಗಳಿಗೆ ಮಾಹಿತಿ ತಿಳಿದು ರಿಚರ್ಡ್ ಮೇರಿಯನ್ ಲಾಝರತ್ ರನ್ನು ಬಿಟ್ಟು ಪರಾರಿಯಾಗಿದೆ ಎಂದು ತಿಳಿಸಿದರು.
ರಕ್ಷಣೆಗೊಳಗಾದ ರಿಚರ್ಡ್ ಮೇರಿಯನ್ ಲಾಝರತ್ ಮತ್ತು ಮಂಗಳೂರು ಪೊಲೀಸರು ಭರತ್‌ಪುರದಲ್ಲಿ ಮೊಕ್ಕಾಂ ಹೂಡಿದ್ದಾರೆ. ಆರೋಪಿಗಳ ಬಗ್ಗೆ ಮಾಹಿತಿ ಲಭಿಸಿದ್ದು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ತಿಳಿಸಿದರು.
ಹಿಂದೆ ಬಂಗಾರ ಸಿಕ್ಕಿದೆ ಎಂದು ಜನರನ್ನು ಮೋಸದ ಬಲೆಗೆ ಕೆಡವುತ್ತಿದ್ದ ತಂಡ ಇದೀಗ ಈ ರೀತಿಯ ಮೋಸದ ಬಲೆ ಬೀಸುತ್ತಿದೆ. 30 ಲಕ್ಷ ರೂ. ವೌಲ್ಯದ ಜನರೇಟರನ್ನು 5 ಲಕ್ಷಕ್ಕೆ ನೀಡುವ ಸುಳ್ಳು ಭರವಸೆ ನೀಡಿ ಈ ಅಪಹರಣ ಮಾಡಲಾಗಿದೆ. ಸಾರ್ವಜನಿಕರು ಭರತ್‌ಪುರದ ಸುತ್ತಮುತ್ತಲ ಪ್ರದೇಶದ ಜನರೊಂದಿಗೆ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದಿದ್ದು , ಖಚಿತಪಡಿಸಿದ ನಂತರ ವ್ಯವಹಾರಕ್ಕೆ ಇಳಿಯುವುದು ಉತ್ತಮ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಂ.ಶಾಂತರಾಜು, ಡಾ.ಸಂಜೀವ ಎಂ. ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.