ಪೊಲೀಸ್ ಕಮಿಷನರ್ ಕಚೇರಿ ವೆಬ್‌ಸೈಟ್‌ನಲ್ಲಿ 153 ಮೋಸ್ಟ್ ವಾಂಟೆಡ್ ಆರೋಪಿಗಳ ವಿವರ
ಮಂಗಳೂರು, ಆ.3: ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯ ಅಂತರ್ಜಾಲ ತಾಣದಲ್ಲಿ 153 ಮೋಸ್ಟ್ ವಾಂಟೆಡ್ ಆರೋಪಿಗಳ ಭಾವಚಿತ್ರವನ್ನು ಪ್ರಕಟಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಎಂ. ಚಂದ್ರಶೇಖರ್ ಹೇಳಿದರು.
ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರಲ್ಲಿ 7 ಮಂದಿ ರೆಡ್‌ಕಾರ್ನರ್ ನೋಟಿಸ್ ಹೊಂದಿದವರು ಮತ್ತು 5 ಮಂದಿ ಲುಕ್‌ಔಟ್ ಸರ್ಕ್ಯುಲರ್ ಇರುವವರ ಬಗ್ಗೆಯೂ ಮಾಹಿತಿ ಇದೆ. ಪ್ರತಿಯೊಬ್ಬ ಆರೋಪಿಯ ಅಪರಾಧದ ಬಗ್ಗೆ ಸಂಪೂರ್ಣ ಮಾಹಿತಿಯಿದ್ದು ಇವರ ಬಗ್ಗೆ ಮಾಹಿತಿ ನೀಡುವವರಿಗೆ ಸೂಕ್ತ ಬಹುಮಾನವನ್ನು ನೀಡಲಾಗುವುದು ಮತ್ತು ಮಾಹಿತಿ ನೀಡಿದವರ ಬಗ್ಗೆ ಗೌಪ್ಯತೆ ಕಾಪಾಡಲಾಗುವುದು ಎಂದು ತಿಳಿಸಿದರು.
153 ಮೋಸ್ಟ್ ವಾಂಟೆಡ್ ಆರೋಪಿಗಳ ಪಟ್ಟಿಯಲ್ಲಿ ರವಿಪೂಜಾರಿ, ಕಲಿಯೋಗೀಶ್, ಅಸ್ಗರ್ ಅಲಿ, ವಿಕ್ಕಿ ಶೆಟ್ಟಿ, ವಿಶ್ವನಾಥ ಕೊರಗ ಶೆಟ್ಟಿ, ಸುಲೈಮಾನ್, ಸಿರಾಜ್ ಉಳ್ಳಾಲ್, ಅಕ್ಬರ್ ವಳಚ್ಚಿಲ್,ಮುಹಮ್ಮದ್ ನವಾಝ್, ತಾಜುದ್ದಿನ್, ಮುಹಮ್ಮದ್ ಇರ್ಷಾದ್, ಮುಹಮ್ಮದ್ ಅನ್ವರ್, ಮುಹಮ್ಮದ್ ಮುಸ್ತಫಾ, ರಶೀದ್ ಮಲಬಾರಿ ಮುಂತಾದವರ ಹೆಸರಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಂ.ಶಾಂತರಾಜು, ಡಾ.ಸಂಜೀವ ಎಂ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.