ಗುವಾಹಟಿ : ಆಗಸದಲ್ಲಿ ತಪ್ಪಿದ ಮಹಾ ದುರಂತ

Update: 2016-08-03 10:38 GMT

ಗುವಾಹಟಿ, ಆ.3: ಎರಡು ಇಂಡಿಗೋ ವಿಮಾನಗಳು ಗುವಾಹಟಿಯ ಆಗಸದಲ್ಲಿ ಢಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ಮಂಗಳವಾರ ಸಂಜೆ ನಡೆದಿದೆಯೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡೂ ವಿಮಾನಗಳಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿ ಪವಾಡಸದೃಶವಾಗಿ ಅಪಾಯದಿಂದ ಪಾರಾದರಾದರೂ ಘಟನೆಯಿಂದ ಆಘಾತಗೊಂಡ ಕನಿಷ್ಠ ನಾಲ್ಕು ಪ್ರಯಾಣಿಕರು ಹಾಗೂ ಇಬ್ಬರು ಕ್ಯಾಬಿನ್ ಸಿಬ್ಬಂದಿಗೆ ವೈದ್ಯಕೀಯ ನೆರವು ಅಗತ್ಯವಾಯಿತು ಎಂದು ಇಂಡಿಗೋ ಏರ್ ಲೈನ್ಸ್ ವಕ್ತಾರರು ತಿಳಿಸಿದ್ದಾರೆ. ನಾಲ್ಕು ಮಂದಿ ಪ್ರಯಾಣಿಕರು ತಮಗೆ ತಲೆ ಸುತ್ತುತ್ತಿರುವ ಅನುಭವವಾಗುತ್ತಿದೆಯೆಂದು ಹೇಳಿದ್ದರು. ಅವರ ಹೊರತಾಗಿ ಇಬ್ಬರು ವಿಮಾನ ಸಿಬ್ಬಂದಿಗೂ ಪ್ರಥಮ ಚಿಕಿತ್ಸೆ ನೀಡಬೇಕಾಯಿತು.

ಗುವಾಹಟಿಯ ಬೊರ್ಡೊಲೊಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಬೈ-ಗುವಾಹಟಿ ಮಧ್ಯೆ ಹಾರಾಟ ನಡೆಸುವ ಇಂಡಿಗೋ ವಿಮಾನ ಭೂಸರ್ಶ ಮಾಡುತ್ತಿದ್ದಂತೆಯೇ ಚೆನ್ನೈಗೆ ಹೊರಟಿದ್ದ ಇನ್ನೊಂದು ಇಂಡಿಗೋ ವಿಮಾನ ಟೇಕ್-ಆಫ್ ಮಾಡಿ ಮೊದಲ ವಿಮಾನ ಇಳಿಯುತ್ತಿದ್ದ ಸ್ಥಳದಿಂದ ಹಾದು ಹೋಯಿತು.

ಮುಂಬೈ-ಗುವಾಹಟಿ ವಿಮಾನವು ಪ್ರತಿಕೂಲ ಹವಾಮಾನದಿಂದಾಗಿ ಏಕಾಏಕಿ 250 ರಿಂದ 300 ಅಡಿ ಕೆಳಗೆ ಬಂದಿದ್ದರಿಂದ ಈ ಘಟನೆ ನಡೆಯಿತೆಂದು ಇಂಡಿಗೋ ಏರ್ ಲೈನ್ಸ್ ವಕ್ತಾರರು ಮಾಹಿತಿ ನೀಡಿದ್ದಾರೆ. ಆದರೆ ಎರಡೂ ವಿಮಾನಗಳು ಯಾವುದೇ ಅಪಾಯವಿಲ್ಲದೆ ಪಾರಾದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News