×
Ad

ಸೆ.2ರಂದು ಎಚ್‌ಎಂಎಸ್‌ನಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ: ನಾಗನಾಥ್

Update: 2016-08-03 16:57 IST

ಮಂಗಳೂರು,ಆ.3: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಆಶ್ರಯದಲ್ಲಿ ಕಾರ್ಮಿಕ ವರ್ಗದ 17 ಬೇಡಿಕೆಗಳ ಈಡೇರಿಕೆಗಾಗಿ ಸೆಪ್ಟೆಂಬರ್ 2 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಎಚ್‌ಎಂಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಾಥ್ ಹೇಳಿದರು.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವತ್ರಿಕ ಮುಷ್ಕರದಲ್ಲಿ ಸಾರ್ವಜನಿಕ, ಖಾಸಗಿರಂಗ, ಸಂಘಟಿತ ಮತ್ತು ಅಸಂಘಟಿತ ವಲಯ ಕಾರ್ಮಿಕ ಸಂಘಟನೆಗಳು ಭಾಗಿಯಾಗಲಿವೆ. ಎಚ್‌ಎಂಎಸ್, ಇಂಟಕ್, ಎಐಟಿಯುಸಿ ಹಾಗೂ ಸಿಐಟಿಯು, ಬಿಎಸೆನ್ನೆಲ್,  ಬ್ಯಾಂಕ್-ವಿಮಾ, ರೈಲ್ವೇ ನೌಕರರು ಹಾಗೂ ಕೇಂದ್ರ ಮತ್ತು ರಾಜ್ಯ ಸೇವಾ ನೌಕರರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಹೇಳಿದರು.

ಮುಷ್ಕರ ಬೇಡಿಕೆಗಳ ಕುರಿತು ಆಗಸ್ಟ್ 9 ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನಾ ಮೆರವಣಿಗೆ, ಆಗಸ್ಟ್ 17 ರಿಂದ 19 ರವರೆಗೆ ಜಿಲ್ಲೆಯಾದ್ಯಂತ ವಾಹನ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು , ಅಂದು ಪೂರ್ವಾಹ್ನ 10 ಗಂಟೆಗೆ ಮಂಗಳೂರು ಮಿನಿವಿಧಾನ ಸೌಧದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಯಲಿದೆ ಎಂದರು.

 ಸಿಐಟಿಯು ಮುಖಂಡ ವಸಂತ ಆಚಾರಿ ಮಾತನಾಡಿ, 2015ರ ಸಾರ್ವತ್ರಿಕ ಮುಷ್ಕರದ ಯಾವುದೇ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಲವಾಗಿವೆ. ಸರಕಾರಗಳು ಮಾಲಕರ ಪರವಾಗಿದ್ದು ಕಾರ್ಮಿಕ ವಿರೋಧಿ ನಿಲುವು ಹೊಂದಿವೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಚ್‌ಎಂಎಸ್‌ನ ಮುಖಂಡ ಸುರೇಶ್ಚಂದ ಶೆಟ್ಟಿ, ಸಿಐಟಿಯು ಮುಖಂಡ ಬಾಲಕೃಷ್ಣ, ಇಂಟಕ್‌ನ ಪ್ರಮುಖರಾದ ರಾಜೇಶ್ ಹಾಗೂ ಎಐಟಿಯುಸಿಯ ಎಚ್.ವಿ. ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News