×
Ad

ಕೇಂದ್ರ ಸರಕಾರದಿಂದ ತೆರಿಗೆಗಳ ಮೂಲಕ ಹಗಲುದರೋಡೆ: ಯಾದವ ಶೆಟ್ಟಿ

Update: 2016-08-03 17:05 IST

ಮಂಗಳೂರು, ಆ.3: ದೇಶದ ಜನರ ಪಾಲಿಗೆ ಅಚ್ಚೇದಿನ್ ಎಂದು ಹೇಳಿದ ಮೋದಿ ಸರಕಾರ ಅದಕ್ಕೆ ವ್ಯತಿರಿಕ್ತವಾಗಿ ಆಡಳಿತ ನಡೆಸುತ್ತಿದೆ. ಕಪ್ಪು ಹಣ ತರುವ ಬದಲು ಅದರ ಸೂತ್ರದಾರರಿಗೆ ರಾಜ ಮರ್ಯಾದೆ ನೀಡುತ್ತಿದೆ. ಸ್ವದೇಶಿ ಎಂಬ ಮಂತ್ರ ಹೇಳಿ, ವಿದೇಶಿ ಬಹು ರಾಷ್ಟ್ರೀಯ ಕಂಪೆನಿಗಳಿಗೆ ದೇಶವನ್ನು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಅಗತ್ಯ ವಸ್ತುಗಳ ಬೆಲೆ ವಿಪರೀತ ಏರಿಕೆಯಾಗಿದೆ. ಜನ ಸಾಮಾನ್ಯರ ಮೇಲೆ ಹೆಚ್ಚುವರಿ ಸಾಲ ತೆರಿಗೆ, ಸ್ವಚ್ಛ ಭಾರತ್ ತೆರಿಗೆ, ಕೃಷಿ ಕಲ್ಯಾಣ್ ತೆರಿಗೆಯನ್ನು ವಿಧಿಸಿ ಹಗಲು ದರೋಡೆಯನ್ನು ನಡೆಸುತ್ತಿದೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ ಆರೋಪಿಸಿದ್ದಾರೆ.

ಅವರು ಸಿಪಿಐ(ಎಂ) ಕೊಂಚಾಡಿ-ಶಕ್ತಿನಗರ-ನಂತೂರು ವಿಭಾಗವಾರು ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಧರಣಿಯನ್ನುದ್ದೇಶಿಸಿ ಅವರು ಮಾತನಾಡಿದರು.

ವಿಭಾಗವಾರು ಹೋರಾಟ ಸಮಿತಿಯ ಸಂಚಾಲಕ ಸಂತೋಷ್ ಶಕ್ತಿನಗರ ಮಾತನಾಡಿ, ಯೆಯ್ಯಿಡಿಯಿಂದ-ಕುಂಟಲ್ಪಾಡಿಗೆ ಹಾಗೂ ಬಾಳೆಬೈಲ್‌ಗೆ ಸಂಪರ್ಕ ಕಲ್ಪಿಡಸುವ ರಸ್ತೆ ಅಗಲೀಕರಣ ಪ್ರಕ್ರಿಯೆಯು ಮಂದಗತಿಯಲ್ಲಿ ಸಾಗುತ್ತಿದ್ದು, ಈ ರಸ್ತೆಯ ವ್ಯಾಪ್ತಿಗೆ ಬರುವ ನಗರ ಪಾಲಿಕೆಯ ಸದಸ್ಯರು ಸರಿಯಾಗಿ ಸ್ಪಂದಿಸುತ್ತಿಲ್ಲ. ಮಾತ್ರವಲ್ಲದೆ ರಸ್ತೆ ಅಭಿವೃದ್ಧಿಗೆ ತಡೆಯೊಡ್ಡುವ ಖಾಸಗಿ ವ್ಯಕ್ತಿಗಳನ್ನು ಎದುರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಕೆಪಿಟಿ ಹಾಗೂ ನಂತೂರು ಜಂಕ್ಷನ್‌ಗಳಲ್ಲಿ ಫ್ಲೈ ಓವರ್ ನಿರ್ಮಿಸಲು ರಾಜ್ಯ ಸರಕಾರ ಕೂಡಲೇ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಅವರು ಆಗ್ರಹಿಸಿದರು.

ಸುನೀಲ್ ಕುಮಾರ್ ಬಜಾಲ್, ಕೃಷ್ಣಪ್ಪ ಕೊಂಚಾಡಿ ಮತ್ತಿತರರು ಮಾತನಾಡಿದರು. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಉಪಸ್ಥಿತರಿದ್ದು, ವಿಭಾಗ ಸಮಿತಿಯ ನವೀನ್ ಬಿ. ಸ್ವಾಗತಿಸಿ, ಲಿಂಗಪ್ಪ ನಂತೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News