×
Ad

ಹಳೆಯಂಗಡಿ: ನಾಮಫಲಕ ಧ್ವಂಸ ಪ್ರಕರಣದ ಆರೋಪಿ ಸೆರೆ

Update: 2016-08-03 17:44 IST

ಮುಲ್ಕಿ, ಆ.3: ಇಲ್ಲಿಗೆ ಸಮೀಪದ ಹಳೆಯಂಗಡಿ ಗ್ರಾಮ ಪಂಚಾಯತ್‌ನ ನಾಮಪಲಕ ಧ್ವಂಸ ಮಾಡಿದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯನ್ನು ಸ್ಥಳೀಯ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿರುವ ದುರ್ಗಾಪರಮೇಶ್ವರೀ ಮಠ ನಿವಾಸಿ ದೇವದಾಸ ದೇವಾಡಿಗ (45) ಎಂದು ಗುರುತಿಸಲಾಗಿದೆ.

ಆರೋಪಿ ದೇವದಾಸ ದೇವಾಡಿಗ ಸೋಮವಾರ ರಾತ್ರಿ ಸುಮಾರು 10:45ರ ವೇಳೆಗೆ ಹಳೆಯಂಗಡಿ ಗ್ರಾಮ ಪಂಚಾಯತ್ ಆವರಣದಲ್ಲಿರುವ ಪಂಚಾಯತ್ ಕಾಮಗಾರಿಯ ಶಿಲಾಫಲಕವನ್ನು ಧ್ವಂಸ ಮಾಡಿ ತನ್ನ ಮನೆಯ ಒಳಗೆ ಬಚ್ಚಿಟ್ಟಿದ್ದ ಎನ್ನಲಾಗಿದೆ. ಬೆಳಗ್ಗೆ ಪಂಚಾಯತ್ ಸಿಬ್ಬಂದಿ ಕಚೇರಿಗೆ ಬಂದು ನೋಡಿದಾಗ ನಾಮಪಲಕವು ಕಾಣೆಯಾದ ಬಗ್ಗೆ ತಿಳಿದು ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದರು.

ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು ಹಳೆಯಂಗಡಿ ಪಂಚಾಯತ್ ಆವರಣದಲ್ಲಿದ್ದ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಕಳ್ಳನ ಸ್ಪಷ್ಟ ಮುಖ ಚಹರೆ ಬಯಲಿಗೆ ಬಂದಿದ್ದು ಕೂಡಲೇ ಆರೋಪಿ ದೇವದಾಸನ ಮನೆಗೆ ತೆರೆಳಿ ಬಚ್ಚಿಟ್ಟಿದ್ದ ಶಿಲಾಫಲಕ ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮುಲ್ಕಿ ಪೊಲೀಸರು ಆರೋಪಿಯನ್ನು ಮಾನಸಿಕ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಆರೋಪಿಯು ಕೇವಲ ಒಂದು ಪಕ್ಷದವರ ನಾಮಫಲಕ ಮಾತ್ರ ಧ್ವಂಸ ಮಾಡಿದ್ದಾನೆ ಎಂದು ಆರೋಪಿಸಿರುವ ಸ್ಥಳೀಯರು, ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಕಳೆದ ಒಂದು ವರ್ಷಗಳಿಂದ ಹಳೆಯಂಗಡಿ, ಮುಲ್ಕಿ ಪರಿಸರಗಳಲ್ಲಿ ಬ್ಯಾನರ್‌ಗೆ ಹಾನಿ ಮಾಡಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಬೇಕೆಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News