ಕಟೀಲು ಸೊಳ್ಳೆ ಉತ್ಪಾದನಾ ಕೇಂದ್ರವಾಗುತ್ತಿದೆ: ಗ್ರಾಮಸ್ಥರ ಆಕ್ರೋಶ

Update: 2016-08-03 13:03 GMT

ಮುಲ್ಕಿ, ಆ.3: ಕಟೀಲು ದೇವಸ್ಥಾನದ ತ್ಯಾಜ್ಯವನ್ನು ನಂದಿನಿ ನದಿಯಲ್ಲಿ ಹಾಕುತ್ತಿದ್ದು ಪರಿಸರವಿಡೀ ದುರ್ವಾಸನೆಯಿಂದ ಕೂಡಿದೆ. ಕಟೀಲು ಬಸ್ಸು ನಿಲ್ದಾಣದ ಹಿಂಭಾಗದಲ್ಲಿ ದೇವಸ್ಥಾನದ ಅನಧಿಕೃತ ಅಂಗಡಿಗಳ ತ್ಯಾಜ್ಯ ಸುರಿಯಲಾಗುತ್ತಿದ್ದು, ಕಟೀಲು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಕಟೀಲು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತೀ ಗ್ರಾಮಸಭೆಯಲ್ಲಿ ಕಟೀಲು ತ್ಯಾಜ್ಯದ ಬಗ್ಗೆ ಹೇಳಿ ಸಾಕಾಗಿದೆ. ಯಾರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥ ಈಶ್ವರ ಕಟೀಲು ಆಕ್ರೋಶ ವ್ಯಕ್ತಪಡಿಸಿದರು. ಕಟೀಲು ಪಂಚಾಯತ್ ವ್ಯಾಪ್ತಿಯಲ್ಲಿ ಪರವಾನಿಗೆ ರಹಿತ ಅಂಗಡಿಗಳ ಸರ್ವೇ ನಡೆಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಕಟೀಲು ಪಂ. ವ್ಯಾಪ್ತಿಯ ಅಜಾರು ಎಂಬಲ್ಲಿ ಶೌಚಾಲಯದ ಅಗತ್ಯವೇ ಇಲ್ಲ. ಆದರೂ ಅಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಮಾಡಲಾಗಿರುವ ಶೌಚಾಲಯಕ್ಕೆ ಪಂಚಾಯತ್ ಬೀಗ ಹಾಕಿ ಇಟ್ಟಿದೆ. ಹಾಗಿದ್ದರೆ ಯಾವ ಪುರುಷಾರ್ಥಕ್ಕಾಗಿ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.

ಪಂಚಾಯತ್ ವ್ಯಾಪ್ತಿಯ ಕೊಂಡೆಮೂಲದಲ್ಲಿ ಖಾಸಗಿ ರಸ್ತೆ ದುರಸ್ತಿಗೆ ಗ್ರಾಮ ಪಂಚಾಯತ್ ಕ್ರಮವಹಿಸದಿರುವ ಬಗ್ಗೆ ಆಕ್ಷೇಪ ಎತ್ತಿದ ಗ್ರಾಮಸ್ಥ ಸಂಜೀವ ಮಡಿವಾಳ, ಆ ರಸ್ತೆಯನ್ನು ಪಂಚಾಯತ್ ತನ್ನ ಅಧೀನಕ್ಕೆ ಪಡೆದುಕೊಂಡು ಶೀಘ್ರ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 

ಮುಲ್ಕಿಯಲ್ಲಿ ರೈತ ಸಂಪರ್ಕ ಕೇಂದ್ರ ಇದ್ದು, ಅದನ್ನು ಕಿನ್ನಿಗೋಳಿಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಲಾಗುತ್ತಿದೆ. ಈ ವರೆಗೂ ಗ್ರಾಮಸ್ಥರ ಕೂಗು ಪಂಚಾಯತ್ ಅಧಿಕಾರಿಗಳಿಗೆ ಕೇಳಿಸಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ ಗ್ರಾಮಸ್ಥರು, ಕಿನ್ನಿಗೋಳಿಯಲ್ಲಿ ರೈತ ಸಂಪರ್ಕ ಕೇಂದ್ರದ ಉಪ ಕಚೇರಿಯನ್ನಾದರೂ ತೆರೆದು ಗ್ರಾಮದ ರೈತರಿಗೆ ನೆರವಾಗಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು. ಕೃಷಿ ಉಪಕರಣಕ್ಕೆ ಅರ್ಜಿ ನೀಡಿ ವರ್ಷ ಕಳೆದರೂ ಈವರೆಗೆ ಸಲಕರಣೆಗಳು ಬಂದಿಲ್ಲ ಎಂದು ಗ್ರಾಮಸ್ಥ ಜಗನ್ನಾಥ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಸಭೆಯು 11 ಗಂಟೆಗೆ ನಿಗದಿಯಾಗಿದ್ದರೂ ಗ್ರಾಮಸ್ಥರು ಕೇವಲ 20 ಮಂದಿ ಇದ್ದ ಕಾರಣ ಸಭೆಯನ್ನು ರದ್ದುಗೊಳಿಸಲು ಕೆಲ ಗ್ರಾಮಸ್ಥರು ಆಗ್ರಹಿಸಿದರು. ಗ್ರಾಮಸಭೆಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿಲ್ಲ, ಗ್ರಾಮಸ್ಥರಿಗಿಂದ ಜಾಸ್ತಿ ಮಂದಿ ವೇದಿಕೆಯಲ್ಲಿದ್ದಾರೆ ಎಂಬ ಆರೋಪಗಳು ಸಭೆಯಲ್ಲಿ ಕೇಳಿ ಬಂದವು. ಕೊನೆಗೆ ನೋಡಲ್ ಅಧಿಕಾರಿ ಮಧ್ಯಪ್ರವೇಶಿಸಿ ಭೆ ನಡೆಸಲು ಅನುವು ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News