ಸುಳ್ಯದಲ್ಲಿ ಜಲ ಸಂರಕ್ಷಣೆ ಜನ ಜಾಗೃತಿ ಯಾತ್ರೆ

Update: 2016-08-03 14:08 GMT

ಸುಳ್ಯ, ಆ.3: ಸುಳ್ಯ ತಾಲೂಕು ಗ್ರಾಮ ವಿಕಾಸ ಸಮಿತಿಗಳ ಒಕ್ಕೂಟದ ಆಶ್ರಯದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಲ ಸಂರಕ್ಷಣೆ ಜನ ಜಾಗೃತಿ ಯಾತ್ರೆ ನಡೆಯುತ್ತಿದೆ.

ಅಜ್ಜಾವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ, ಶಾಸಕ ಎಸ್.ಅಂಗಾರ ಯಾತ್ರೆಗೆ ಚಾಲನೆ ನೀಡಿದರು. ನೀರಿನ ಬಳಕೆ, ರಕ್ಷಣೆಯ ಕುರಿತು ಜನ ಜಾಗೃತಿಗೆ ಮೂಡಿಸಲು ಗ್ರಾಮ ವಿಕಾಸದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನಪ್ರತಿನಿಧಿಗಳು ಸರಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವುದರ ಜೊತೆಗೆ ಜನರ ಏಳಿಗೆಗೆ ಅಗತ್ಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಅಧಿಕಾರಿಗಳು ಯೋಜನೆಗಳನ್ನು ಜನರಿಗೆ ತಲುಪಿಸುವ ಸಂದರ್ಭ ಕಾನೂನನ್ನು ಮಾತ್ರ ನೋಡುವುದಲ್ಲ, ಯೋಜನೆಯ ಪ್ರಯೋಜನ ಜನರಿಗೆ ತಲುಪುವಂತೆ ನೋಡಿಕೊಳ್ಳುವುದೂ ಮುಖ್ಯ ಎಂದು ಅವರು ಹೇಳಿದರು.

ಗ್ರಾಮ ವಿಕಾಸ ಸಮಿತಿಗಳ ವಿಭಾಗ ಪ್ರಮುಖ್ ಪ್ರವೀಣ್ ಸರಳಾಯ ಗ್ರಾಮ ಸಮಿತಿಗಳ ಉದ್ದೇಶದ ಕುರಿತು ಮಾಹಿತಿ ನೀಡಿದರು. ಶಿಕ್ಷಣ, ಸಂಸ್ಕಾರ, ಆರೋಗ್ಯ ಹಾಗೂ ಸ್ವಾವಲಂಬನೆ ಕುರಿತು ಗ್ರಾಮ ವಿಕಾಸ ಸಮಿತಿಗಳ ಮೂಲಕ ಅರಿವು ಮೂಡಿಸಲಾಗುತ್ತದೆ. ಗಾಂಧೀಜಿ ಹಾಗೂ ಸ್ವಾಮಿ ವಿವೇಕಾನಂದರ ಕಲ್ಪನೆಯ ಗ್ರಾಮ ಸ್ವರಾಜ್ಯ ನಿರ್ಮಾಣದತ್ತ ಸಮಿತಿ ಆಶಯ ಹೊಂದಿದೆ ಎಂದರು.

ಆಧುನಿಕತೆ ಹೆಚ್ಚಾದಂತೆ ನೀರಿನ ದುರ್ಬಳಕೆ ಕೂಡಾ ಹೆಚ್ಚಾಗಿದೆ. ಸಾಂಪ್ರದಾಯಿಕ ವ್ಯವಸ್ಥೆಗಳಿಗೆ ಮತ್ತೆ ಮರಳಬೇಕಿದೆ ಎಂದ ಅವರು ಸಮಿತಿ ಹಮ್ಮಿಕೊಂಡ ನೀರಿನ ಜಾಗೃತಿ ಯಾತ್ರೆ ಆಂದೋಲನವಾಗಲಿ ಎಂದರು.

ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾವತಿ ಬಾಳಿಲ, ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್ ರೈ, ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ಸುಭೋದ್ ರೈ, ಅಜ್ಜಾವರ ಹಾಲು ಉತದಕರ ಸಂಘದ ಅಧ್ಯಕ್ಷ ರಾಹುಲ್ ಅಡಂಗಾಯ, ಸಹಾಯಕ ಕೃಷಿ ನಿರ್ದೇಶಕ ಪಾಲಿಚಂದ್ರ, ತಾಲೂಕು ಪಂಚಾಯತ್ ಅಧಿಕಾರಿ ಭವಾನಿಶಂಕರ ಮೊದಲಾದವರಿದ್ದರು. ಸುದರ್ಶನ ಪಾತಿಕಲ್ಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News