×
Ad

ಕಲ್ಲಡ್ಕ: ಮನೆ ಬೆಂಕಿಗಾಹುತಿ; ಲಕ್ಷಾಂತರ ರೂ. ನಷ್ಟ

Update: 2016-08-03 20:52 IST

ಬಂಟ್ವಾಳ, ಜ. 3: ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮನೆಯೊಂದು ಸಂಪೂರ್ಣ ಭಸ್ಮವಾದ ಘಟನೆ ತಾಲೂಕಿನ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಈ ಮನೆ ಇಲ್ಲಿನ ನಿವಾಸಿ ಸೀತಾರಾಮ ಎಂಬವರಿಗೆ ಸೇರಿದ್ದಾಗಿದೆ. ಬೆಂಕಿಗಾಹುತಿಯಾದ ಸಂದರ್ಭದಲ್ಲಿ ಮನೆಯೊಳಗಡೆ ಯಾರೂ ಇರಲಿಲ್ಲ. ಸೀತಾರಾಮ ಕೆಲಸದ ನಿಮಿತ್ತ ಪೇಟೆಗೆ ಹೋಗಿದ್ದರೆ ಅವರ ಪತ್ನಿ ಹಾಗೂ ಇತರರು ಮನೆಯ ಮುಂಭಾಗದ ಗದ್ದೆಯಲ್ಲಿ ಕೆಲಸದಲ್ಲಿದ್ದರು.

ಮಧ್ಯಾಹ್ನದ ಹೊತ್ತಿಗೆ ಪತ್ನಿ ಮನೆಗೆ ಬಂದಾಗ ಅಡುಗೆ ಕೋಣೆಯಲ್ಲಿ ಬೆಂಕಿಯು ಧಗಧಗನೆ ಉರಿಯುತ್ತಿತ್ತೆನ್ನಲಾಗಿದೆ. ತಕ್ಷಣ ಅವರು ಬೊಬ್ಬೆ ಹಾಕಿದ್ದು ಅಕ್ಕಪಕ್ಕದವರು ಧಾವಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದರಾದರೂ ಅದಾಗಲೇ ಬೆಂಕಿಯ ಕೆನ್ನಾಲಗೆ ಮನೆಯ ಛಾವಣಿಯನ್ನು ಸಂಪೂರ್ಣ ಆವರಿಸಿತ್ತು. ಪರಿಣಾಮ ಮನೆಯ ಸೊತ್ತುಗಳು ಹಾಗೂ ಶೇಖರಿಸಿಟ್ಟಿದ್ದ ಕಟ್ಟಿಗೆ, ತೆಂಗಿನ ಕಾಯಿ ಸೇರಿದಂತೆ ಇನ್ನಿತರ ಸಾಮಗ್ರಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ.

ಮಾಹಿತಿ ಪಡೆದ ಬಂಟ್ವಾಳ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಸುದ್ದಿ ತಿಳಿದ ಬಂಟ್ವಾಳ ಸಿಐ ಬಿ.ಕೆ.ಮಂಜಯ್ಯ, ಎಸ್ಸೈ ನಂದಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಹಾಗೆಯೇ ಕಂದಾಯ ನಿರೀಕ್ಷಕ ರಾಮ ಬಾಳ್ತಿಲ ಪಂಚಾಯತ್‌ನ ಪಿಡಿಒ ಪುಷ್ಪಾ ಸ್ಥಳಕ್ಕಾಗಮಿಸಿ ನಷ್ಟದ ಅಂದಾಜು ಪರಿಶೀಲಿಸಿದರು.

ಈ ಘಟನೆಯಿಂದ ಸುಮಾರು 15 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News