ದಲಿತ ಪ್ರತಿಭಾವಂತನ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಕನಸು ನನಸಿಗೆ ಸಹಕರಿಸಿದ ಕೇರಳ ಸರಕಾರ

Update: 2016-08-03 16:15 GMT

ತಿರುವನಂತಪುರಂ, ಆ.3: ಕಡು ಬಡತನದ ಹಿನ್ನೆಲೆಯಿಂದ ಬಂದ ಕಾಸರಗೋಡಿನ ದಿನಗೂಲಿ ದಲಿತ ನೌಕರನ ಮಗ, ಪ್ರತಿಭಾವಂತ ಬಿನೇಶ್‌ರಿಗೆ ಎಂಎಸ್ಸಿ ಸಾಮಾಜಿಕ ಮಾನವಶಾಸ್ತ್ರ ವ್ಯಾಸಂಗ ಮಾಡಲು ಲಂಡನಿನ ಪ್ರತಿಷ್ಠಿತ ಸ್ಕೂಲ್ ಆಫ್ ಇಕಾನಮಿಕ್ಸ್ 45 ಲಕ್ಷ ರೂ.ವಿದ್ಯಾರ್ಥಿ ವೇತನವನ್ನು ನೀಡಿದೆ.ಆದರೆ ಇದರ ಪ್ರವೇಶಕ್ಕೆ ಕಡ್ಡಾಯವಾಗಿರುವ ಐಇಎಲ್‌ಟಿಎಸ್ ಪರೀಕ್ಷೆಗೆ ಹಾಗೂ ದುಬಾರಿ ವಿಮಾನ ಟಿಕೆಟ್‌ಗೆ ಹಣ ಹೊಂದಿಸಲು ಅಸಾಧ್ಯವಾದಾಗ ಮಾಧ್ಯಮಗಳ ಮೂಲಕ ಮಾಹಿತಿ ಪಡೆದ ರಾಜ್ಯ ಸರಕಾರ ಆತನ ನೆರವಿಗೆ ಧಾವಿಸಿದೆ.

ಬಾಲನ್ ಹಾಗೂ ಗಿರಿಜಾ ದಂಪತಿಯ ಪುತ್ರ ಬಿನೇಶ್, ಜಗದ್ವಿಖ್ಯಾತ ಶೈಕ್ಷಣಿಕ ಸಂಸ್ಥೆಯಲ್ಲಿ ದಾಖಲಾತಿ ಹಾಗೂ 45ಲಕ್ಷ ರೂ.ವಿದ್ಯಾರ್ಥಿ ವೇತನ ಗಿಟ್ಟಿಸಿಕೊಂಡ ಬಗ್ಗೆ ಸ್ಥಳೀಯ ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗಿದೆ. ಇದನ್ನು ಗಮನಿಸಿ ಪ್ರತಿಭಾವಂತ ವಿದ್ಯಾರ್ಥಿಯ ನೆರವಿಗೆ ಬಂದ ಕೇರಳ ಪ.ಜಾತಿ ,ಪ. ಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎ.ಕೆ.ಬಾಲನ್ ತನ್ನ ಕಚೇರಿಯಲ್ಲಿ ಬಿನೇಶ್‌ರನ್ನು ವೈಯಕ್ತಿಕವಾಗಿ ಮಂಗಳವಾರ ಭೇಟಿಯಾಗಿ ಒಂದು ವೇಳೆ ವಿದ್ಯಾರ್ಥಿ ವೇತನದಲ್ಲಿ ಪ್ರಯಾಣ ದರ ಒಳಗೊಂಡಿಲ್ಲದಿದ್ದರೆ ಸರಕಾರವು ಅದನ್ನು ಭರಿಸಲಿದೆ ಎಂದು ಭರವಸೆಯನ್ನು ನೀಡಿದ್ದಾರೆ.

ಚೆನ್ನೈನಲ್ಲಿರುವ ಬ್ರಿಟಿಷ್ ಕೌನ್ಸಿಲ್‌ನಿಂದ ನಡೆಸಲಾಗುವ ಐಇಎಲ್‌ಟಿಎಸ್ ತರಬೇತಿಯ ಪರೀಕ್ಷೆಯ ಶುಲ್ಕ 26,500 ರೂ.ನ ಚೆಕ್‌ನ್ನು ಸಚಿವರು ತನ್ನ ಕಚೇರಿಯಲ್ಲಿಯೇ ಬಿನೇಶ್‌ರಿಗೆ ಹಸ್ತಾಂತರಿಸಿದ್ದಾರೆ. ಮಾರನೇ ದಿನವೇ ಚೆನ್ನೈಗೆ ತೆರಳಲು ಸೂಚಿಸಿದ್ದಾರೆ ಹಾಗೂ ಹಣವನ್ನು ಬಿನೇಶ್‌ರ ಖಾತೆಗೆ ಜಮಾ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಪ್ರವೇಶ ಪಡೆಯುತ್ತಿರುವ ಪ್ರಥಮ ದಲಿತ ವಿದ್ಯಾರ್ಥಿ ಬಿನೇಶ್ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News