ಮದ್ಯ ಸೇವಿಸಿ, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ ಭಾರೀ ದಂಡ: ನೂತನ ಕಾನೂನು

Update: 2016-08-03 16:24 GMT

ಹೊಸದಿಲ್ಲಿ,ಆ.3: ಸಾರಿಗೆ ನಿಯಮಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ಭಾರೀ ಮೊತ್ತದ ದಂಡವನ್ನು ವಿಧಿಸಲು ಅವಕಾಶ ನೀಡುವ ಮಹತ್ವದ ಮೋಟಾರು ವಾಹನ (ತಿದ್ದುಪಡಿ) ವಿಧೇಯಕ 2016ಕ್ಕೆ ಕೇಂದ್ರ ಸಂಪುಟವು ಬುಧವಾರ ಅನುಮೋದನೆ ನೀಡಿದೆ.

ಸಂಪುಟ ಅಂಗೀಕರಿಸಿದ ಈ ವಿಧೇಯಕದ ನಿಯಮಗಳ ಪ್ರಕಾರ, ಮದ್ಯ ಸೇವಿಸಿ ವಾಹನ ಚಲಾಯಿಸಿದರೆ 10 ಸಾವಿರ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಮದ್ಯ ಸೇವನೆಯಿಂದ ಸಂಭವಿಸುವ ಅಪಘಾತಗಳನ್ನು ತಡೆಯಲು ಈ ವಿಧೇಯಕವು ನೆರವಾಗಲಿದೆಯೆಂದು ನಿರೀಕ್ಷಿಸಲಾಗಿದೆ.

ಅಧಿಕ ವೇಗದ ವಾಹನ ಚಾಲನೆಗೆ 1 ಸಾವಿರ ರೂ.ಗಳಿಂದ 4 ಸಾವಿರ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ವಿಮೆಯಿಲ್ಲದೆ ವಾಹನ ಚಾಲನೆಗೆ 2 ಸಾವಿರ ರೂ. ದಂಡ ಅಥವ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು.ಹೆಲ್ಮೆಟ್ ರಹಿತ ದ್ವಿಚಕ್ರವಾಹನ ಚಾಲನೆಗೆ 2 ಸಾವಿರ ರೂ.ದಂಡ ಹಾಗೂ ಮೂರು ತಿಂಗಳುಗಳ ಕಾಲ ಲೈಸೆನ್ಸನ್ನು ಅಮಾನತಿನಲ್ಲಿಡಲಾಗುವುದು.

 ಅಪ್ರಾಪ್ತ ವಯಸ್ಕರು ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅವರ ಪಾಲಕರು ಅಥವಾ ಮಾಲಕರು ಹೊಣೆಗಾರರಾಗಲಿದ್ದು, ವಾಹನದ ನೋಂದಣಿಯನ್ನು ರದ್ದುಪಡಿಸಲಾಗುವುದು.

ಗುದ್ದೋಡು (ಹಿಟ್ ಆ್ಯಂಡ್ ರನ್) ಪ್ರಕರಣಗಳಲ್ಲಿ 2 ಲಕ್ಷ ರೂ. ವರೆಗೆ ಪರಿಹಾರ ನೀಡಲು ಈ ತಿದ್ದುಪಡಿ ವಿಧೇಯಕವು ಅವಕಾಶ ಒದಗಿಸುತ್ತದೆ. ಪ್ರಸ್ತುತ ಇಂತಹ ಪ್ರಕರಣಗಳಲ್ಲಿ 25 ಸಾವಿರ ರೂ.ವರೆಗೆ ಗರಿಷ್ಠ ಪರಿಹಾರ ನೀಡಲಾಗುತ್ತಿತ್ತು. ಆದರೆ ಹಿಚ್ ಆ್ಯಂಡ್ ರನ್ ಪ್ರಕರಣದಲ್ಲಿ, ಸಂತ್ರಸ್ತ ಕುಟುಂಬಕ್ಕೆ 10 ಲಕ್ಷ ರೂ.ವರೆಗೆ ಪರಿಹಾರವನ್ನು ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News