ಪಕ್ಷಾಂತರ ಕಾಯ್ದೆ: 1996ರ ತೀರ್ಪಿನ ಮರುಪರಿಶೀಲನೆಗೆ ಸುಪ್ರೀಂಕೋರ್ಟ್ ನಕಾರ
ಹೊಸದಿಲ್ಲಿ, ಆ.3: ಒಂದು ರಾಜಕೀಯ ಪಕ್ಷದಿಂದ ನಾಮಕರಣಗೊಂಡಿರುವ ಅಥವಾ ಚುನಾಯಿತನಾಗಿರುವ ಸಂಸದ ಅಥವಾ ಶಾಸಕ ಉಚ್ಚಾಟನೆಯ ಬಳಿಕವೂ ಪಕ್ಷದ ಸಚೇತಕಾಜ್ಞೆಗೆ ಬದ್ಧವಿರುತ್ತಾನೆಂಬ ಪಕ್ಷಾಂತರ ಕಾಯ್ದೆಯ ಬಗ್ಗೆ ನೀಡಲಾಗಿದ್ದ 1996ರ ಚಾರಿತ್ರಿಕ ತೀರ್ಪು ಜಾರಿಯಲ್ಲಿಯೇ ಇರಲಿದೆಯೆಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ಈ ತೀರ್ಪಿನ ಮರು ಪರಿಶೀಲನೆಗೆ ಅದು ನಿರಾಕರಿಸಿದೆ.
ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠವೊಂದು, ಉತ್ತರ ಪ್ರದೇಶದ ರಾಜಕಾರಣಿ ಅಮರ್‌ಸಿಂಗ್, ನಟಿ-ರಾಜಕಾರಣಿ ಜಯಪ್ರದಾ ಹಾಗೂ ಬಿಜೆಡಿಯಿಂದ ಉಚ್ಚಾಟಿಸಲ್ಪಟ್ಟಿದ್ದ ಪ್ಯಾರಿಮೋಹನ್ ಮಹಾಪಾತ್ರ ದಾಖಲಿಸಿದ್ದ ಮನವಿಯೊಂದನ್ನು ಖುಲಾಸೆಗೊಳಿಸಿದೆ. ರಾಜ್ಯಸಭಾ ಸದಸ್ಯರಾಗಿದ್ದ ಅಮರ್ ಸಿಂಗ್ ಹಾಗೂ ಲೋಕಸಭಾ ಸದಸ್ಯೆಯಾಗಿದ್ದ ಜಯಪ್ರದಾರನ್ನು ಸಮಾಜವಾದಿ ಪಕ್ಷ ಉಚ್ಚಾಟಿಸಿತ್ತು.
ಅರ್ಜಿದಾರ ಸಂಸದರು ತಮ್ಮ ಅವಧಿಯನ್ನು ಪೂರೈಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸದಿರುವುದೇ ಸೂಕ್ತವೆಂದು ನ್ಯಾಯಮೂರ್ತಿಗಳಾದ ಪಿ.ಸಿ. ಪಂತ್ ಹಾಗೂ ಅರುಣ್ ಮಿಶ್ರಾ ಸದಸ್ಯರಾಗಿದ್ದ ಪೀಠ ಅಭಿಪ್ರಾಯಿಸಿದೆ.
ತಾವು ಮನವಿಗಳ ಸುದೀರ್ಘ ವಿಚಾರಣೆ ನಡೆಸಿದ್ದೇವೆ. ಆದರೆ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲವೆಂದು ನ್ಯಾಯಪೀಠ ಹೇಳಿತು.
ಸಂವಿಧಾನದ 10ನೆ ಪರಿಚ್ಛೇದವು ಪಕ್ಷದಲ್ಲಿಲ್ಲದ ಸಂಸದರು ಹಾಗೂ ಶಾಸಕರನ್ನು ಗುರುತಿಸುವುದಿಲ್ಲವೆಂದು 1996ರ ತೀರ್ಪಿನಲ್ಲಿ ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಆ ತೀರ್ಪಿನನ್ವಯ ಉಚ್ಚಾಟಿತ ಕಾನೂನು ನಿರ್ಮಾತೃಗಳು ತಾವು ಆಯ್ಕೆಯಾಗಿದ್ದ ಪಕ್ಷದ ಸಚೇತಕಾಜ್ಞೆಗೆ ಬಾಧ್ಯರೇ ಎಂಬ ಪ್ರಶ್ನೆಯನ್ನು ಅರ್ಜಿದಾರರು ಎತ್ತಿದ್ದರು.