ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ
ಪುತ್ತೂರು, ಆ.3: ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕ್ಸಿತೆಗೆ ದಾಖಲಾಗಿ ಬಳಿಕ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪುತ್ತೂರು ತಾಲೂಕಿನ ಬೆಳಂದೂರಿನ ರೈಲು ಮಾರ್ಗದ ಸಮೀಪ ಬುಧವಾರ ಪತ್ತೆಯಾಗಿದೆ. ಬಂಟ್ವಾಳ ತಾಲೂಕಿನ ಬಿಳಿಯೂರು ಇರುಬೈಲು ನಿವಾಸಿ ಚೀಂಕ್ರ ಎಂಬವರ ಪುತ್ರ ಬಾಬು(37) ಮೃತ ವ್ಯಕ್ತಿ. ಜ್ವರದ ಕಾರಣದಿಂದ ಜು.30 ರಂದು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಬಾಬು ಮಂಗಳವಾರ ಆಸ್ಪತ್ರೆಯಿಂದ ನಾಪತ್ತೆಯಾಗಿರುವುದಾಗಿ ಅವರ ಸಹೋದರಿ ಲೀಲಾ ಎಂಬವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿದ ಸಂದರ್ಭ ಮಂಗಳವಾರ ರಾತ್ರಿ ಬೆಳಂದೂರಿನಲ್ಲ್ಲಿ ರೈಲು ಢಿಕ್ಕಿಯಾಗಿ ಮೃತಪಟ್ಟ ವ್ಯಕ್ತಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಬಾಬು ಅವರದೆಂದು ದೃಢಪಟ್ಟಿದೆ. ಅವಿವಾಹಿತರಾಗಿರುವ ಮೃತ ಬಾಬು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಮಂಗಳೂರು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.