ಸುಳ್ಯ: ವಿದ್ಯುತ್ ತಂತಿ ಮೇಲೆ ಮರ ಬಿದ್ದು ಹೋರಿ ಮೃತ್ಯು
Update: 2016-08-04 17:55 IST
ಸುಳ್ಯ, ಆ.4: ಗಾಳಿ ಮಳೆಗೆ ಒಣಗಿದ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದು, ನೇತಾಡುತ್ತಿದ್ದ ತಂತಿ ಸ್ಪರ್ಶಿಸಿ ಹೋರಿಯೊಂದು ಸಾವನ್ನಪ್ಪಿದ ಘಟನೆ ಕೊಡಿಯಾಲ್‌ಬೈಲಿನಲ್ಲಿ ನಡೆದಿದೆ.
ಗುರುವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ಕೊಡಿಯಾಲ್‌ಬೈಲಿನ ಲಕ್ಷ್ಮಣ ಎಂಬವರ ಜಮೀನಲ್ಲಿದ್ದ ಒಣಗಿದ ಮರವೊಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ತಿರುಗುವಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಇದರಿಂದ ವಿದ್ಯುತ್ ತಂತಿಗಳು ನೆಲ ಮಟ್ಟದಲ್ಲಿ ನೇತಾಡುತ್ತಿದ್ದವು. ಈ ವೇಳೆ ರಸ್ತೆಯಲ್ಲಿ ಸಾಗಿದ ಹೋರಿಯೊಂದು ತಂತಿ ಸ್ಪರ್ಶಿಸಿ ಮೃತಪಟ್ಟಿದೆ.
ವಿಷಯ ತಿಳಿದ ನಗರ ಪಂಚಾಯತ್ ಸದಸ್ಯ ರಮಾನಂದ ರೈ ಸ್ಥಳಕ್ಕೆ ತೆರಳಿ ಮೆಸ್ಕಾಂ ಕಚೇರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಆಗಮಿಸಿದ ಮೆಸ್ಕಾಂ ಸಿಬ್ಬಂದಿ ರಸ್ತೆಗೆ ಬಿದ್ದ ತಂತಿಯನ್ನು ತೆರವು ಮಾಡಿದ್ದು, ನಗರ ಪಂಚಾಯತ್ ವತಿಯಿಂದ ಹೋರಿಯನ್ನು ದಫನ ಮಾಡಲಾಯಿತು.