ತುಂಬೆ ನೂತನ ಕಿಂಡಿ ಅಣೆಕಟ್ಟಿನ ಕಾಮಗಾರಿ ವೀಕ್ಷಿಸಿದ ಸಚಿವ ರೋಷನ್ ಬೇಗ್

Update: 2016-08-04 14:11 GMT

ಮಂಗಳೂರು, ಆ.4: ಮನಪಾದಲ್ಲಿ ಪ್ರಗತಿ ಪರಿಶೀಲನೆಯ ಬಳಿಕ ತುಂಬೆಯಲ್ಲಿ ನೂತನ ಕಿಂಡಿ ಅಣೆಕಟ್ಟು ಕಾಮಗಾರಿಯನ್ನು ವೀಕ್ಷಿಸಿದರು. ಅಣೆಕಟ್ಟಿನಲ್ಲಿ ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, ಪೈಟಿಂಗ್, ಇಲೆಕ್ಟ್ರಿಕಲ್ ಕೆಲಸ ಬಾಕಿ ಇದೆ. ಮಳೆಗಾಲ ಮುಗಿದ ಕೂಡಲೇ ಬಾಕಿ ಇರುವ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಹೇಳಿದರು.

ಈ ಸಂದರ್ಭ ಅಣೆಕಟ್ಟಿನಲ್ಲಿ ಅಲ್ಲಿನ ಸ್ಥಳೀಯರಿಗೆ ವಾಕ್ ವೇ (ಒಂದು ದಡದಿಂದ ಮತ್ತೊಂದು ದಡಕ್ಕೆ ನಡೆದಾಡಲು)ಗೆ ಅವಕಾಶ ನೀಡಬಹುದೇ ಎಂದು ಸ್ಥಳೀಯರ ಆಗ್ರಹಕ್ಕೆ ಸಂಬಂಧಿಸಿ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಸೇತುವೆಯಲ್ಲಿ ತಾಂತ್ರಿಕ ಕಾರಣಗಳಿಂದ ಸ್ಥಳೀಯರಿಗೆ ನಡೆದಾಡಲು ಅವಕಾಶ ಸಾಧ್ಯವಿಲ್ಲ ಎಂದರು.

ಇದಕ್ಕೂ ಮುಂಚಿತವಾಗಿ ಮಂಗಳೂರು ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡ್ಯಾಂ ಕುರಿತು ವಿಷಯ ಪ್ರಸಾತಿಪಿಸಿದ ಮೇಯರ್ ಹರಿನಾಥ್, ತುಂಬೆ ವೆಂಟೆಂಡ್ ಡ್ಯಾಂನಲ್ಲಿ 5 ಮೀಟರ್‌ನಷ್ಟು ನೀರು ನಿಲ್ಲಿಸಬೇಕಾದರೆ 51 ಎಕರೆ, 6 ಮೀಟರ್‌ಗೆ ನೀರು ನಿಲ್ಲಿಸಬೇಕಾದರೆ 160 ಎಕರೆ ಹಾಗೂ ನೂತನ ಅಣೆಕಟ್ಟಿನ ಎತ್ತರವಾದ 7.5 ಮೀಟರ್‌ಗೆ ನೀರು ನಿಲ್ಲಿಸಬೇಕಾದರೆ 400 ಎಕರೆ ಭೂಸ್ವಾಧೀನವಾಗಬೇಕಾಗಿದೆ. ಅದಕ್ಕೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಂಪನ್ಮೂಲದ ಕೊರತೆ ಇದೆ. ಸರಕಾರ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಮೇಯರ್ ಹರಿನಾಥ್, ಶಾಸಕ ಜೆ.ಆರ್. ಲೋಬೊ, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸಿಲಾಟ್ ಪಿಂಟೋ, ಕವಿತಾ ಸನಿಲ್, ಅಪ್ಪಿಲತಾ, ಮನಪಾ ಆಯುಕ್ತ ಕವಿತಾ ಸನಿಲ್ ಉಪಸ್ಥಿತರಿದ್ದರು.

ಮಳೆಗಾಲದಲ್ಲೂ ತುಂಬಿ ಹರಿಯುತ್ತಿಲ್ಲ ತುಂಬೆ ಅಣೆಕಟ್ಟು!

ಪ್ರತಿ ವರ್ಷ ಮಳೆಗಾಲದಲ್ಲಿ ಅಂದರೆ ಜುಲೈ, ಆಗಸ್ಟ್ ತಿಂಗಳಲ್ಲಿ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಸುಮಾರು 13 ಅಡಿ ಎತ್ತರದ ಹಳೆಯ ತುಂಬೆ ಅಣೆಕಟ್ಟಿನಲ್ಲಿ ನೀರು ತುಂಬಿ ಹರಿಯುತ್ತದೆ. ಆದರೆ, ಇಂದು ಸಚಿವರು ತುಂಬೆ ಅಣೆಕಟ್ಟಿಗೆ ಭೇಟಿ ನೀಡಿದ ವೇಳೆ ನೀರಿನ ಮಟ್ಟ 10.7 ಅಡಿಗಳಾಗಿತ್ತು. ಜುಲೈ ತಿಂಗಳ 2 ಮತ್ತು 3ನೆ ವಾರದಲ್ಲಿ ಕೊಂಚ ಬಿರುಸಾಗಿದ್ದ ಮಳೆ, ಕಳೆದ ಕೆಲ ದಿನಗಳಲ್ಲಿ ಮತ್ತೆ ಕ್ಷೀಣಿಸಿರುವುದರಿಂದ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕುಸಿತಗೊಂಡಿರುವಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News