ಉಪ್ಪಳ : ತೀವ್ರಗೊಂಡ ಕಡಲ್ಕೊರೆತ; ಕುಟುಂಬಗಳ ಸ್ಥಳಾಂತರ

Update: 2016-08-04 14:34 GMT

ಮಂಜೇಶ್ವರ, ಆ.4: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಶಾರದಾನಗರ, ಮೂಸೋಡಿ ಸಹಿತ ವಿವಿಧೆಡೆ ಕಡಲ್ಕೊರೆತ ವ್ಯಾಪಕಗೊಂಡಿದ್ದು 3 ಮನೆಗಳು ಸಮುದ್ರಪಾಲಾಗುವ ಭೀತಿಯಲ್ಲಿದ್ದು, ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಶಾರದಾನಗರದಲ್ಲಿ ಶಕುಂತಲ ಸಾಲ್ಯಾನ್‌ರ ಮನೆ ಕಡಲ್ಕೊರೆತದಿಂದ ಸಮುದ್ರ ಪಾಲಾಗುವ ಭೀತಿಯಲ್ಲಿದೆ. ಕಳೆದ ಹಲವು ದಿನಗಳಿಂದ ಕಡಲ್ಕೊರೆತ ತೀವ್ರಗೊಂಡಿದೆ. ಇದರಿಂದ ಮನೆ ಸಂಪೂರ್ಣ ಜಲಾವೃತಗೊಂಡು ಯಾವುದೇ ಕ್ಷಣದಲ್ಲಿ ಅಪಾಯ ಉಂಟಾಗುವ ಭೀತಿಯಲ್ಲಿದ್ದು ಕುಟುಂಬವನ್ನು ಬುಧವಾರ ರಾತ್ರಿ ಸ್ಥಳಾಂತರಿಸಲಾಗಿದೆ. ಕಡಲ್ಕೊರೆತ ತಡೆಗೆ ಮನೆಯ ಸುತ್ತಲೂ ಇರಿಸಲಾಗಿದ್ದ ಮರಳುಚೀಲ ಸಮುದ್ರ ಪಾಲಾಗಿದೆ.

ಬುಧವಾರ ರಾತ್ರಿ ಆಸುಪಾಸಿನ ಯುವಕರು ಮತ್ತೆ ಮರಳು ತುಂಬಿದ ಚೀಲವನ್ನು ಇರಿಸಿದ್ದರೂ ಇದು ಕೂಡಾ ನೀರು ಪಾಲಾಗುವ ಸಾಧ್ಯತೆಯಿದೆ. ಈ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ ವೀಕ್ಷಿಸಿ ತೆರಳುತ್ತಿರುವುದಲ್ಲದೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲವೆಂದು ಪ್ರದೇಶ ವಾಸಿಗಳು ಆರೋಪಿಸಿದ್ದಾರೆ. ಮೂಸೋಡಿ ಅಧಿಕದಲ್ಲಿ ಕಡಲ್ಕೊರೆತದಿಂದ ಅಬ್ದುಲ್ ಖಾದರ್, ಹಮೀದ್‌ರ ಮನೆ ಅಪಾಯದ ಸ್ಥಿತಿಯಲ್ಲಿದ್ದು ಕುಟುಂಬವನ್ನು ಸ್ಥಳಾಂತರಿಸಲಾಗಿದೆ.

ಅಲ್ಲದೆ ಈ ಪರಿಸರದಲ್ಲಿರುವ ಹಸನಬ್ಬ ಎಂಬವರ ಅಂಗಡಿ ಅಪಾಯದ ಸ್ಥಿತಿಯಲ್ಲಿದೆ. ಈ ಪ್ರದೇಶದಲ್ಲಿ ಸಮುದ್ರ ತೀರದಿಂದ ರಾತ್ರಿ ಹೊತ್ತಿನಲ್ಲಿ ವ್ಯಾಪಕ ಮರಳು ಸಾಗಾಟ ನಡೆಯುತ್ತಿದ್ದು, ಇದರಿಂದ ಮನೆಗಳು ಅಪಾಯದ ಸ್ಥಿತಿಗೆ ತಲುಪಲು ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News