ಕೊಲೆ ಪ್ರಕರಣದ ಆರೋಪ ಸಾಬೀತು: ಆ.6 ರಂದು ಶಿಕ್ಷೆ ಪ್ರಕಟ ಸಾಧ್ಯತೆ
ಮಂಗಳೂರು, ಆ. 4: ಅಡುಗೆ ಮಾಡುವ ವಿಚಾರದಲ್ಲಿ ಬಾಡಿಗೆ ಕೊಠಡಿಯಲ್ಲಿ ಸಹೋದ್ಯೋಗಿಯನ್ನು ಕೊಲೆ ಮಾಡಿದ ಆರೋಪವು ಇಲ್ಲಿನ ಒಂದನೆ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆ.6 ರಂದು ಶಿಕ್ಷೆ ಪ್ರಕಟವಾಗಲಿದೆ.
ಹರ್ಯಾಣದ ಶಿವಾನಿಮಂಡಿ ನಿವಾಸಿ ಸಂದೀಪ್ ಸೋನಿ (31) ಕೊಲೆ ಪ್ರಕರಣದ ಅಪರಾಧಿ. ಈತ ಸಹೋದ್ಯೋಗಿ ಹಾಗೂ ಜತೆಗೆ ವಾಸ ಮಾಡುತ್ತಿದ್ದ ಸ್ನೇಹಿತ ರಾಜಸ್ಥಾನದ ರೋಹಿತಾಶ್ವ (27) ಎಂಬಾತನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದ.
ನಗರದ ಬಂದರ್‌ನಲ್ಲಿರುವ ಇಂಡೋ ಆರ್ಯ ಸೆಂಟ್ರಲ್ ಪಾಸ್‌ಪೋರ್ಟ್ ಕಂಪೆನಿಯ ಉದ್ಯೋಗಿಗಳಾಗಿದ್ದ ಸಂದೀಪ್ ಸೋನಿ, ರೋಹಿತಾಶ್ವ ಕುಮಾರ್, ಸುಭಾಷ್, ಆಶೀಶ್, ಅಶೋಕ್ ಮತ್ತು ಕುಲದೀಪ್ ಎಂಬವರು ಮಣ್ಣಗುಡ್ಡ ಸಿಕ್ವೇರಾ ಕಂಪೌಂಡಿನಲ್ಲಿ ಕಂಪೆನಿ ಒದಗಿಸಿದ ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದರು.
2010ರ ಅ.7ರಂದು ಸಂಜೆ ಅಡುಗೆ ಮಾಡುವ ವಿಚಾರದಲ್ಲಿ ಸಂದೀಪ್ ಸೋನಿ ಮತ್ತು ರೋಹಿತಾಶ್ವರ ನಡುವೆ ವಾಗ್ವಾದ ನಡೆದಿತ್ತು. ಗಲಾಟೆಯನ್ನು ಉಳಿದ ನಾಲ್ಕು ಮಂದಿ ಮಧ್ಯ ಪ್ರವೇಶಿಸಿ ಬಿಡಿಸಿದ್ದರು. ಬಳಿಕ ಎಲ್ಲರೂ ಸೇರಿ ಊಟ ಮಾಡಿ ಮಲಗಿದ್ದರು. ರಾತ್ರಿ 2 ಗಂಟೆಯ ಹೊತ್ತಿಗೆ ಆರೋಪಿ ಸಂದೀಪ್ ಸೋನಿ ರೋಹಿತಾಶ್ವನ ಹೊಟ್ಟೆಗೆ ಚೂರಿಯಿಂದ ಇರಿದಿದ್ದ. ರೋಹಿತಾಶ್ವನದ ಬೊಬ್ಬೆ ಕೇಳಿ ಇತರರು ಆಗಮಿಸಿ ರಕ್ತದ ಮಡುವಿನಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು 2010 ರ ನ.7ರಂದು ಹರ್ಯಾಣದ ಶಿವಾನಿಯಲ್ಲಿ ಬಂಧಿಸಲಾಗಿತ್ತು. ಈ ಬಗ್ಗೆ ಪೊಲೀಸ್ ಬಂದರ್‌ನ ಅಂದಿನ ಇನ್‌ಸ್ಪೆಕ್ಟರ್ ವಿನಯ ಗಾಂವ್ಕರ್ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.