ಶತಕೋಟಿ ವರ್ಷಗಳ ಹಿಂದೆ ಭಾರತವು ದಕ್ಷಿಣ ಧ್ರುವದ ಭಾಗವಾಗಿತ್ತು!
ಕೋಲ್ಕತಾ, ಆ.4: ಶತಕೋಟಿ ವರ್ಷಗಳ ಹಿಂದೆ ಭಾರತ ಉಪಖಂಡವು ದಕ್ಷಿಣ ಧ್ರುವದ ಭಾಗವಾಗಿತ್ತೆಂಬ ಊಹೆಯನ್ನು ಬೆಂಬಲಿಸುವ ಪುರಾವೆ ಭೂಗರ್ಭ ಶಾಸ್ತ್ರಜ್ಞರಿಗೆ ಲಭಿಸಿದೆ. ಆದರೆ, ಮಾನವ ವಿಕಾಸದ ಮೊದಲು ಭೂ ಪದರಗಳ ಚಲನೆಯಿಂದಾಗಿ ಅದು ಹಲವು ಬಾರಿ ದಕ್ಷಿಣ ಧ್ರುವದಿಂದ ಬೇರ್ಪಟ್ಟು ಮರು ಜೋಡನೆಗೊಂಡಿತ್ತೆಂಬದೂ ತಿಳಿದು ಬಂದಿದೆ.
ಭೂ ಪದರದ ಸೃಷ್ಟಿಯ ಕುರಿತು ಸಂಶೋಧನೆ ನಡೆಸುತ್ತಿರುವ ಭಾರತ ಹಾಗೂ ಸ್ವಿಝರ್ಲೆಂಡ್‌ಗಳ ಭೂಗರ್ಭ ಶಾಸ್ತ್ರಜ್ಞರ ತಂಡವೊಂದು ಪೂರ್ವ ಘಟ್ಟ ಪ್ರದೇಶದಲ್ಲಿ ಉಪಖಂಡ ಪದರದ ಪುರಾತನ ಬಂಡೆಗಳ ಅಧ್ಯಯನ ನಡೆಸಿ, ಖಂಡಗಳ ರಚನೆಯ ಕುರಿತು ಪ್ರಮುಖ ಸುಳಿವುಗಳನ್ನು ಪತ್ತೆ ಹಚ್ಚಿದೆ.
ದಕ್ಷಿಣ ಧ್ರುವ ಖಂಡ ಹಾಗೂ ಭಾರತ ಉಪಖಂಡಗಳು ಹಿಂದೊಮ್ಮೆ ವಿಶಾಲವಾದ ಒಂದೇ ಖಂಡವಾಗಿತ್ತು. ಸುಮಾರು 1.5 ಶತಕೋಟಿ ವರ್ಷಗಳ ಹಿಂದೆ ಅವು ಬೇರ್ಪಟ್ಟವೆಂಬ ಊಹೆಯನ್ನು ಸಾಬೀತುಪಡಿಸಲು ತಾವು ಇದೇ ಮೊದಲ ಬಾರಿ ಶಕ್ತರಾಗಿದ್ದೇವೆಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಐಐಟಿ-ಖರಗಪುರದ ಭೂಗರ್ಭ ಶಾಸ್ತ್ರಜ್ಞ ದೇವಾಶಿಷ್ ಉಪಾಧ್ಯಾಯ ಹೇಳಿದ್ದಾರೆ.
ಭಾರತ ಮತ್ತು ದಕ್ಷಿಣ ಧ್ರುವ ಬಳಿಕ ಸಾಗರವೊಂದರಿಂದ ಬೇರ್ಪಡಿಸಲ್ಪಟ್ಟಿದ್ದವು. ಭೂ ದ್ರವ್ಯದ ಚಲನೆಯಿಂದಾಗಿ ಈ ಸಾಗರ ಮತ್ತೆ ಮುಚ್ಚಲ್ಪಟ್ಟಿತ್ತು. ಬಳಿಕ ಈ ಎರಡು ಭೂ ಖಂಡಗಳು ಒಂದಕ್ಕೊಂದು ಅಪ್ಪಳಿಸಿ ಸುಮಾರು 1 ಶತಕೋಟಿ ವರ್ಷಗಳ ಹಿಂದೆ ಪೂರ್ವ ಘಟ್ಟಗಳ ಪರ್ವತ ಪಟ್ಟಿ ರಚನೆಯಾಗಿತ್ತೆಂದು ಅವರು ತಿಳಿಸಿದ್ದಾರೆ.
ಈ ಎರಡು ಖಂಡಗಳು ಪುನಃ ಬೇರ್ಪಟ್ಟು ಹಳೆಯ ಸಾಗರವಿದ್ದಲ್ಲಿ ಹೊಸ ಸಾಗರ ನಿರ್ಮಾಣವಾಯಿತೆಂದು ಇತ್ತೀಚೆಗೆ ‘ಎಲ್ಸೆವಿಯರ್’ ಅಂತಾರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅವರ ಸಂಶೋಧನೆ ವಿವರಿಸಿದೆ.
ಪುನಃ ಉಪಖಂಡಗಳ ಚಲನೆ ಹಿಮ್ಮುಖವಾಗಿ, 60 ಕೋಟಿ ವರ್ಷಗಳ ಹಿಂದೆ ಮತ್ತೊಂದು ಅಪ್ಪಳಿಸುವಿಕೆ ನಡೆಯಿತು. ಆಗ ದಕ್ಷಿಣ ಭಾರತದುದ್ದಕ್ಕೂ ಪೂರ್ವ ಘಟ್ಟಗಳು ಹಾಗೂ ಹಿಂದೊಮ್ಮೆ ಭಾರತ ಉಪಖಂಡದ ಭಾಗವೇ ಆಗಿದ್ದ ಶ್ರೀಲಂಕಾ ಮಾತ್ರವಲ್ಲದೆ ಮಡಗಾಸ್ಕರ್ ವರೆಗೆ ಚಾಚಿದವೆಂದು ಸ್ವಿಝರ್ಲೆಂಡ್‌ನ ಬರ್ನ್ ವಿಶ್ವವಿದ್ಯಾನಿಲಯದ ಭೂಗರ್ಭ ವಿಜ್ಞಾನ ವಿಭಾಗದ ಪ್ರೊ. ಕ್ಲಾಸ್ ಮೆಯ್ಗುರ್ ತಿಳಿಸಿದ್ದಾರೆ.