ಟ್ರಾನ್ಸ್‌ಫಾರ್ಮರ್‌ಗೆ ಕಾರು ಢಿಕ್ಕಿ: ಪ್ರಕರಣ ದಾಖಲು
Update: 2016-08-04 23:43 IST
ಮೂಡುಬಿದಿರೆ, ಆ.4: ಕಡಂದಲೆಯ ಗೋಲಿದಡಿ ಎಂಬಲ್ಲಿ ವಿದ್ಯುತ್ ಪರಿವರ್ತಕಕ್ಕೆ ಕಾರು ಢಿಕ್ಕಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾರನ್ನು ವಶಕ್ಕೆ ಪಡೆದು ಪೋಲಿಸರು ಆರೋಪಿ ವಿರುದ್ಧ್ದ ಪ್ರಕರಣ ದಾಖಲಿಸಿದ್ದಾರೆ.
ಜುಲೈ 31ರಂದು ಗೋಲಿದಡಿ ಸಮೀಪ ಸುರತ್ಕಲ್ ನಿವಾಸಿ ಬಾಲಕೃಷ್ಣ ಎಂಬವರು ವಿರುದ್ಧ್ದ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದ ಕಾರು ಚರಂಡಿಯ ಮೂಲಕ ಹಾದು ವಿದ್ಯುತ್ ಪರಿವರ್ತಕಕ್ಕೆ ಢಿಕ್ಕಿಯಾಗಿತ್ತು. ಕಾರಿನ ವೇಗಕ್ಕೆ ಪರಿವರ್ತಕ ಸಂಪೂರ್ಣ ನುಜ್ಜು ಗುಜ್ಜ್ಜಾಗಿ ಬಿದ್ದಿದ್ದು, ಈ ಸಂದರ್ಭ ಬಾಲಕೃಷ್ಣರವರು ಮೆಸ್ಕಾಂ ಅಧಿಕಾರಿಗಳ ಬಳಿ ಇಲಾಖೆಗಾದ ನಷ್ಟವನ್ನು ಭರಿಸುವುದಾಗಿ ಒಪ್ಪಿಕೊಂಡಿದ್ದರೆನ್ನಲಾಗಿದ್ದು, ಆ ಬಳಿಕ ಸಂಪೂರ್ಣ ಖರ್ಚು ನೀಡಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ. ಈ ಪರಿವರ್ತಕ ಬೆಳ್ಮಣ್ ವ್ಯಾಪ್ತಿಗೆ ಬರುವುದರಿಂದ ಬೆಳ್ಮಣ್ ಶಾಖಾಧಿಕಾರಿ ಪ್ರದೀಪ್ ಕುಮಾರ್ ಮೂಡುಬಿದಿರೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.