ಮದುವೆ ನಿರಾಕರಿಸಿದ ಯುವತಿಗೆ ಹಲ್ಲೆ
ಕಾಪು, ಆ.4: ಮದುವೆಯಾಗುವಂತೆ ಪೀಡಿಸಿ, ಒಪ್ಪದ ಯುವತಿ ಹಾಗೂ ಆಕೆಯ ತಂಗಿಗೆ ಹಲ್ಲೆ ನಡೆಸಿರುವ ಘಟನೆ ಮಲ್ಲಾರ ಗ್ರಾಮದ ರಾಣಿಕೇರಿ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ಹಲ್ಲೆಗೊಳಗಾದವರನ್ನು ರಾಣಿಕೇರಿಯ ಶಶಿಕಲಾ ಹಾಗೂ ಆಕೆಯ ತಂಗಿ ಸಾವಿತ್ರಿ ಎಂದು ಗುರುತಿಸಲಾಗಿದೆ. ಕಾರ್ಕಳದ ಕಾಣ್ಯಕೇರಿಯ ಸದಾಶಿವ ಟೀಕು ಎಂಬಾತ ಹಲ್ಲೆ ನಡೆಸಿದ ಆರೋಪಿ ಎಂದು ಹೇಳಲಾಗಿದೆ. ಶಶಿಕಲಾ ಅವರ ಪರಿಚಯದ ಸದಾಶಿವ ಎಂಬಾತ ಮದುವೆಯಾಗುವಂತೆ ಹಲವು ವರ್ಷಗಳಿಂದ ಪೀಡಿಸುತ್ತಿದ್ದ. ಆದರೆ ಶಶಿಕಲಾ ಮದುವೆಗೆ ನಿರಾಕರಿಸಿದ್ದರು. ಬುಧವಾರ ಸಂಜೆ ಶಶಿಕಲಾ ಮಲ್ಲಾರ ಗುಡ್ಡೆಕೇರಿಯ ಗೇರುಬೀಜ ಪ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುವಾಗ ಮನೆ ಸಮೀಪ ಬೈಕ್‌ನಲ್ಲಿ ಬಂದ ಸದಾಶಿವ ಅವರನ್ನ್ನು ಅಡ್ಡಗಟ್ಟಿ ಮತ್ತೆ ಪೀಡಿಸಿದ್ದಾನೆ. ಆಗ ಶಶಿಕಲಾ ಬೊಬ್ಬೆ ಹಾಕಿದ್ದು, ಸ್ಥಳಕ್ಕೆ ಅವರ ತಂಗಿ ಸಾವಿತ್ರಿ ಬಂದಿದ್ದಾರೆ. ಈ ವೇಳೆ ಸದಾಶಿವ ಅವರಿಬ್ಬರಿಗೆ ಜೀವ ಬೆದರಿಕೆ ಹಾಕಿ, ಹಲ್ಲೆ ನಡೆಸಿ, ಸಾವಿತ್ರಿಯವರ ತಲೆಗೆ ಸೋಡಾ ಬಾಟಲಿಯಿಂದ ಹೊಡೆದು ಪರಾರಿಯಾಗಿದ್ದಾನೆ ಎಂದು ಶಶಿಕಲಾ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.