×
Ad

ಬಂಟ್ವಾಳ : ಮಾಲಕನ ಕಿರುಕುಳ - ಬಾರ್ ನೌಕರ ಆತ್ಮಹತ್ಯೆಗೆ ಶರಣು

Update: 2016-08-05 09:53 IST

ಬಂಟ್ವಾಳ, ಆ.5: ತಾನು ಕೆಲಸಕ್ಕಿದ್ದ ಬಾರ್ ಮಾಲಕನ ಕಿರುಕುಳದಿಂದ ಮಾನಸಿಕವಾಗಿ ನೊಂದ ವಿವಾಹಿತನೋರ್ವ ಈ ಬಗ್ಗೆ ಡೆತ್ ನೋಟ್ ಬರೆದಿಟ್ಟು ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳ ತಾಲೂಕಿನ ಮೊಡಂಕಾಪು ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಕೃಷ್ಣಪ್ಪ ಪೂಜಾರಿ(38) ಆತ್ಮಹತ್ಯೆ ಮಾಡಿಕೊಂಡವರು. ಇವರು ಕಳೆದ ಎಂಟು ವರ್ಷಗಳಿಂದ ಮೆಲ್ಕಾರ್‌ನ ಬಾರ್ ಆ್ಯಂಡ್ ರೆಸ್ಟೂರೆಂಟ್‌ವೊಂದರಲ್ಲಿ ಕ್ಯಾಷಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಗುರುವಾರ ರಾತ್ರಿ ಕ್ಯಾಷ್ ಡ್ರಾವರ್‌ನಲ್ಲಿನಲ್ಲಿದ್ದ 50 ಸಾವಿರ ರೂ. ಕಾಣೆಯಾಗಿತ್ತೆನ್ನಲಾಗಿದ್ದು, ಇದನ್ನು ನೀನೇ ತೆಗೆದಿರುವುದಾಗಿ ಬಾರ್ ಮಾಲಕ ಬಾರ್ ಮಾಲಕ ರಾಜೇಶ್ ಮತ್ತು ಮಾಧವ ಎಂಬವರು ಕೃಷ್ಣಪ್ಪ ಪೂಜಾರಿ ವಿರುದ್ಧ ಆಪಾದನೆ ಹೊರಿಸಿದ್ದಾರೆನ್ನಲಾಗಿದೆ. ಅಲ್ಲದೆ ಕಳವಾಗಿರುವ 50 ಸಾವಿರ ರೂ. ಕೊಡದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಕೃಷ್ಣಪ್ಪ ಸಾವಿಗೆ ಮುನ್ನ ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಕೂಡಾ ಹಲವು ಬಾರಿ ಬಾರ್ ಮಾಲಕ ರಾಜೇಶ್ ಮತ್ತು ಮಾಧವ ಹಣ ಕಾಣೆಯಾದ ಬಗ್ಗೆ ತನ್ನ ವಿರುದ್ಧ ಆಪಾದನೆ ಹೊರಿಸಿದ್ದು, ನಿರ್ವಾಹವಿಲ್ಲದೆ ತಾನು ಬಡ್ಡಿ ವ್ಯವಹಾರ ನಡೆಸಿ ಅವರಿಗೆ ಹಣ ಸಂದಾಯ ಮಾಡಿರುವುದಾಗಿಯೂ ಕೃಷ್ಣಪ್ಪ ಡೆತ್ ನೋಟ್ನಲ್ಲಿ ಬರೆದಿಟ್ಟಿದ್ದಾರೆ.

ಮೃತ ಕೃಷ್ಣಪ್ಪರಿಗೆ ಒಂದು ಮಗುವಿದ್ದು, ಪತ್ನಿ ಸ್ಥಳೀಯ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಬಂಟ್ವಾಳ ನಗರ ಠಾಣೆ ಎಸ್ಸೈ ನಂದಕುಮಾರ್ ಹಾಗೂ ಸಿಬ್ಬಂದಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News