×
Ad

ಬೆಳ್ಳಿ ತೆರೆಯೇರಿದ ‘ದಬಕ್ ದಬಾ ಐಸಾ’

Update: 2016-08-05 11:00 IST

ಮಂಗಳೂರು, ಆ.5: ಸೀಮಿತ ಮಾರುಕಟ್ಟೆಯನ್ನು ಹೊಂದಿರುವ ತುಳು ಚಿತ್ರರಂಗದಲ್ಲಿ 511 ದಿನದ ಪ್ರದರ್ಶನದ ದಾಖಲೆಯನ್ನು ನಿರ್ಮಿಸಿದ ಪ್ರಕಾಶ್ ಪಾಂಡೇಶ್ವರ ಅವರ ಚಾಲಿಪೊಲೀಲು ಸಿನಿಮಾ ಮತ್ತು ದಬಕ್‌ದಬಾ ಐಸಾ ಸಿನಿಮಾವನ್ನು ನೋಡಿದಾಗ ನನಗೂ ತುಳು ಸಿನಿಮಾ ನಿರ್ಮಿಸುವ ಆಸಕ್ತಿ ಮೂಡುತ್ತಿದೆ. ಮುಂದಿನ ನನ್ನ ಚಿತ್ರ ತುಳು ಭಾಷೆಯಲ್ಲಿ ಮೂಡಿ ಬರಲಿದ್ದು ಪ್ರಕಾಶ್ ಪಾಂಡೇಶ್ವರ ಜೊತೆ ಗೂಡಿ ಈ ಸಿನಿಮಾ ನಿರ್ಮಿಸುತ್ತೇನೆ ಎಂದು ಬಹುಭಾಷ ಖ್ಯಾತ ನಿರ್ಮಾಪಕರಾದ ಕೆ. ಮಂಜು ತಿಳಿಸಿದರು.
ಜಯಕಿರಣ ಫಿಲಮ್ಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ ಅವರು ಕತೆ ಚಿತ್ರಕಥೆ ಬರೆದು ನಿರ್ಮಿಸಿ ನಿರ್ದೇಶಿಸಿರುವ ದಬಕ್‌ದಬಾ ಐಸಾ ತುಳು ಸಿನಿಮಾ ಪ್ರದರ್ಶನವನ್ನು ಸುಚಿತ್ರ ಚಿತ್ರ ಮಂದಿರದಲ್ಲಿ ಉದ್ಘಾಟಿಸಿ ಅವರು ಈ ಇಂಗಿತ ವ್ಯಕ್ತ ಪಡಿಸಿದರು.
ತುಳು ಚಿತ್ರ ರಂಗಕ್ಕೆ ಸುದೀರ್ಘ 45 ವರುಷಗಳ ಇತಿಹಾಸವಿದೆ, ಈವರೆಗೆ 70 ರಷ್ಟು ಸಿನಿಮಾ ಬಂದಿದೆ ಚಾಲಿಪೊಲೀಲು ಸಿನಿಮಾ 511 ದಿನವನ್ನು ಪೂರೈಸಿದೆ ಚಿತ್ರರಂಗಕ್ಕೆ ಇದೆಲ್ಲ ಹೊಸ ದಾಖಲೆಯೇ ಸರಿ. ನಾನು ತೆಲುಗು ಸಿನಿಮಾ ಹೊರತು ಪಡಿಸಿ ಉಳಿದೆಲ್ಲ ಭಾಷೆಯಲ್ಲಿ ಸಿನಿಮಾ ನಿರ್ಮಿಸಿದ್ದೇನೆ. ಇಂದಿನ ತುಳು ಸಿನಿಮಾ ಪರ್ವವನ್ನು ಗಮನಿಸಿದಾಗ, ಸಿನಿಮಾದಲ್ಲಿ ಪಾಂಡೇಶ್ವರ್ ತೋರಿದ ಶ್ರದ್ದೆ, ಸಿನಿಮಾದ ಅಚ್ಚುಕಟ್ಟುತನ, ಕಲಾವಿದರ ಅಭಿನಯ ಇದೆಲ್ಲ ನನಗೆ ಹೊಸ ಉತ್ಸಾಹ ನೀಡಿದೆ, ಕೇವಲ ತುಳು ಭಾಷೆಯ ಸಿನಿಮಾ ಉಳಿಯ ಬೇಕು ಬೆಳೆಯಬೇಕು ತುಳು ಸಿನಿಮಾ ಕೂಡಾ ಇತರ ಭಾಷೆಯ ಸಿನಿಮಾಕ್ಕೆ ಸರಿಸಾಟಿಯಾಗ ಬೇಕು ಎನ್ನುವ ಪ್ರಕಾಶ್ ಅವರ ಚಿಂತನೆ ನನಗೆ ಇಷ್ಟವಾಯಿತು ಎಂದು ಕೆ. ಮಂಜು ತಿಳಿಸಿದರು.
ತುಳುನಾಡಲ್ಲಿ ತುಳು ಸಿನಿಮಾ ಅಭಿಮಾನಿಗಳು ಇರುವವರೆಗೆ ಪೈರೆಸಿಯಂತಹ ಕೃತ್ಯದಿಂದ ಯಾರೂ ಏನನ್ನೂ ಸಾಧಿಸಲಾರರು, ಕನ್ನಡ ಸಿನಿಮಾ ರಂಗವೇ ಬೆರಗಾಗುವ ರೀತಿಯಲ್ಲಿ ತುಳು ಸಿನಿಮಾ ಇಂಡಸ್ಟ್ರೀ ಬೆಳೆಯುತ್ತಿದೆ ಇದು ಉತ್ತಮ ಬೆಳವಣಿಗೆ ಎಂದು ತುಳು ಚಲನಾಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಟಿ.ಎ ಶ್ರೀನಿವಾಸ್ ತಿಳಿಸಿದರು.
 ನಿರ್ಮಾಪಕ ದೇವದಾಸ್ ಪಾಂಡೇಶ್ವರ್, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಲ.ಕಿಶೋರ್ ಡಿ‘ಶೆಟ್ಟಿ, ಅಖಿಲಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್. ಶಶಿಧರ್‌ಶೆಟ್ಟಿ, ನಿರ್ಮಾಪಕ ಆರ್, ಧನ್‌ರಾಜ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಮೋಹನ್ ಕೊಪ್ಪಲ, ಇನ್‌ಲ್ಯಾಂಡ್ ಬಿಲ್ಡರ್ಸ್‌ ಮಾಲಕ ಸಿರಾಜ್ ಅಹಮ್ಮದ್, ಚಲನಚಿತ್ರ ನಟರುಗಳಾದ ನವೀನ್ ಡಿ‘ಪಡೀಲ್, ದೇವದಾಸ್ ಕಾಪಿಕಾಡ್, ಲಕ್ಷ್ಮಣ್ ಕುಮಾರ್ ಮಲ್ಲೂರು, ಸರೋಜಿನಿ ಶೆಟ್ಟಿ, ಚಿತ್ರದ ನಾಯಕಿ ಶೀತಲ್ ನಾಯಕ್, ಗಿರೀಶ್ ಶೆಟ್ಟಿ ಕಟೀಲು, ಸುರೇಂದ್ರ ಬಂಟ್ವಾಳ್, ಪ್ರದೀಪ್ ಆಳ್ವ, ಮಧು ಸುರತ್ಕಲ್, ಪಿವಿಆರ್ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಹೇಮಂತ್, ಚೇತನ್ ಆನಂದ್, ಪ್ರಮೋದ್ ಬಳ್ಳಾಲ್‌ಭಾಗ್, ಉದಯ ಪೂಜಾರಿ, ಹಿರಿಯ ನಟ ವಿ.ಜಿ ಪಾಲ್, ತಾರನಾಥ್ ಶೆಟ್ಟಿ ಬೋಳಾರ, ಕಲಾ ನಿರ್ದೇಶಕ, ತಮ್ಮ ಲಕ್ಷಣ, ರಾಜೇಶ್ ಮಂಗಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಉಮನಾಥ್ ಕೋಟ್ಯಾನ್, ಕರ್ನೂರು ಮೋಹನ್ ರೈ, ಮುಂತಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.


ಪಡೀಲ್ ನಟನೆಗೆ ಶಹಬ್ಬಾಸ್ ಎಂದ ಕಾಪಿಕಾಡ್
ನವೀನ್ ಪಡೀಲ್ ರಂಗಭೂಮಿಯಲ್ಲಿ ನಗುವಿನ ಜೊತೆ ಅಳಿಸಿದ್ದನ್ನು ನೋಡಿದ್ದೇನೆ. ಆದರೆ ಸಿನಿಮಾದಲ್ಲಿ ನವೀನ್ ಅಳಿಸಿದ್ದನ್ನು ಇದೇ ಮೊದಲ ಬಾರಿಗೆ ನೋಡಿದ್ದು. ನವೀನ್ ಪಡೀಲ್ ಬದುಕಿಗೆ ದಬಕ್‌ದಬಾ ಐಸಾದ ಪಾತ್ರ ತಿರುವು ನೀಡುವುದು ನಿಶ್ಚಿತ ಎಂದು ಖ್ಯಾತ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರು ನವೀನ್ ಡಿ‘ಪಡೀಲ್ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

12 ಥಿಯೇಟರ್‌ಗಳಲ್ಲಿ ಬಿಡುಗಡೆ
ದಬಕ್ ದಬಾ ಐಸಾ ಚಲನಚಿತ್ರವು ಮಂಗಳೂರಿನಲ್ಲಿ ಸುಚಿತ್ರ, ಬಿಗ್‌ ಸಿನೆಮಾಸ್, ಪಿವಿಆರ್, ಸಿನಿಪೊಲಿಸ್, ಕಾರ್ಕಳದಲ್ಲಿ ರಾಧಿಕಾ, ಬೆಳ್ತಂಗಡಿಯಲ್ಲಿ ಭಾರತ್, ಉಡುಪಿಯಲ್ಲಿ ಕಲ್ಪನಾ, ಪುತ್ತೂರಿನಲ್ಲಿ ಅರುಣಾ, ಬಿ.ಸಿ.ರೋಡ್‌ನಲ್ಲಿ ನಕ್ಷತ್ರ, ಮೂಡಬಿದ್ರೆಯಲ್ಲಿ ಅಮರಶ್ರೀ, ಮಣಿಪಾಲದಲ್ಲಿ ಐನಾಕ್ಸ್ ಹಾಗೂ ಬೆಂಗಳೂರಿನ ಕೋರಮಂಗಲದಲ್ಲಿ ಪಿ.ವಿ.ಆರ್‌ನಲ್ಲಿ ತೆರೆಕಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News