×
Ad

ವಿಚಾರಣಾಧೀನ ಕೈದಿಗಳಿಂದ ಜೈಲು ಅಧೀಕ್ಷಕರ ಕ್ವಾರ್ಟ್ರಸ್ ಪರಿಸರ ಸ್ವಚ್ಛತೆ!

Update: 2016-08-05 11:24 IST

ಮಂಗಳೂರು, ಆ.5: ಹೊಡೆದಾಟ, ಹತ್ಯೆ, ಗಾಂಜಾ ಸೇವನೆ ಇತ್ಯಾದಿ ವಿಚಾರಗಳಿಂದ ಸುದ್ದಿಯಾಗುತ್ತಿರುವ ಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹ ಇದೀಗ ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದೆ. ಈ ಬಾರಿ ಸುದ್ದಿಯ ಮೂಲ ಕೈದಿಗಳಲ್ಲ, ಬದಲಿಗೆ ಜೈಲು ಅಧೀಕ್ಷಕ!
ವಿಚಾರಣಾಧೀನ ಕೈದಿಗಳನ್ನು ಜೈಲಿನೊಳಗೆಯೇ ಸೇಫ್ ಆಗಿಡುವುದು ಕಷ್ಟಕರವಾಗಿರುವ ಪ್ರಸ್ತುತ ದಿನಗಳಲ್ಲಿ ಅವರನ್ನು ಜೈಲಿನಿಂದ ಹೊರಗೆ ಕರೆದೊಯ್ದು ಅಧೀಕ್ಷಕರ ಕ್ವಾರ್ಟ್ರಸ್ ಪರಿಸರವನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿಸಲಾಗಿದೆ. ಈ ಘಟನೆ ನಡೆದಿದ್ದು ಗುರುವಾರ. ನಿನ್ನೆ ಮಧ್ಯಾಹ್ನದ ವೇಳೆ ಸುಮಾರು 10 ಮಂದಿ ವಿಚಾರಣಾಧೀನ ಕೈದಿಗಳನ್ನು ಜೈಲಿನ ಹೊರಭಾಗದಲ್ಲಿರುವ ಜೈಲು ಅಧೀಕ್ಷಕರ ಕ್ವಾರ್ಟ್ರಸ್‌ಗೆ ಕರೆದೊಯ್ದು ಅವರಿಂದ ಅಲ್ಲಿನ ಕಸಕಡ್ಡಿ, ಹುಲ್ಲುಗಳನ್ನು ತೆಗೆಸುವ ಕೆಲಸ ಮಾಡಿಸಲಾಗಿದೆ.
ಕಾನೂನು ಪ್ರಕಾರ ನ್ಯಾಯಾಲಯ ಅಥವಾ ತುರ್ತು ಕಾರಣ ಹೊರತುಪಡಿಸಿ ಯಾವುದೇ ಕಾರಣಕ್ಕೆ ಕೈದಿಗಳನ್ನು ಜೈಲಿನಿಂದ ಹೊರಗೆ ಕರೆದೊಯ್ಯುವಂತಿಲ್ಲ. ಆದರೆ ಮಂಗಳೂರು ಜೈಲಿನಲ್ಲಿ ಇದೇ ರೀತಿ ಹಲವು ಸಮಯಗಳಿಂದ ಕೈದಿಗಳನ್ನು ಬಾರಿ ಹೊರಗೆ ಕರೆದೊಯ್ದು ಕೆಲಸ ಮಾಡಿಸುತ್ತಿರುವುದಾಗಿ ತಿಳಿದುಬಂದಿದೆ.
ಘಟನೆಯ ಕುರಿತಂತೆ ರಾಜ್ಯ ಬಂಧಿಖಾನೆ ಡಿಜಿಪಿ ಸತ್ಯನಾರಾಯಣರವರು ಮಂಗಳೂರು ಜೈಲು ಅಧೀಕ್ಷಕರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಕೈದಿಗಳನ್ನು ಜೈಲಿನೊಳಗಡೆಯೇ ಕೆಲಸ ಮಾಡಿಸಬಹುದು. ಆದರೆ ಯಾವುದೇ ಕಾರಣಕ್ಕೂ ಅವರನ್ನು ಜೈಲಿನ ಹೊರಗೆ ಕರೆದೊಯ್ದು ಕೆಲಸ ಮಾಡಿಸುವಂತಿಲ್ಲ. ಮಂಗಳೂರಿನಲ್ಲಿ ಗುರುವಾರ ನಡೆದಿರುವ ಘಟನೆ ಗಮನಕ್ಕೆ ಬಂದಿದ್ದು, ಈ ಬಗ್ಗೆ ಅಧೀಕ್ಷಕರಿಗೆ ಸೂಕ್ತ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯ ಕುರಿತಂತೆ ಪ್ರತಿಕ್ರಿಯಿಸಿರುವ ಮಂಗಳೂರು ಜೈಲು ಅಧೀಕ್ಷಕ ಕೃಷ್ಣಮೂರ್ತಿ, ಕೈದಿಗಳನ್ನು ಪರಿಸರ ಸ್ವಚ್ಛತೆಗಾಗಿ ಜೈಲಿನಿಂದ ಹೊರಗೆ ಕರೆದುಕೊಂಡು ಹೋಗಿರುವುದು ನಿಜ. ಆದರೆ ಈ ಸಂದರ್ಭ ಯಾವುದೇ ಭದ್ರತಾ ಲೋಪ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News