×
Ad

ಆಝಾನ್ ಅವಹೇಳನ ಪ್ರಕರಣ: ಬಾಲಕೃಷ್ಣ ಪಿಳ್ಳೆ ವಿರುದ್ಧ ಕೇಸು ದಾಖಲು

Update: 2016-08-05 12:07 IST

ತಿರುವನಂತಪುರಂ, ಆ.5: ಕೇರಳ ಕಾಂಗ್ರೆಸ್(ಬಿ) ಅಧ್ಯಕ್ಷ ಆರ್.ಬಾಲಕೃಷ್ಣ ಪಿಳ್ಳೆಯ ವಿವಾದಾಸ್ಪದ ಭಾಷಣಕ್ಕಾಗಿ ಅವರ ವಿರುದ್ಧ ಪತ್ತನಾಪುರಂ ಪೊಲೀಸರು ಕೇಸು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಪಿಳ್ಳೆಯ ಭಾಷಣ ಕೋಮುದ್ವೇಷ ಹುಟ್ಟುಹಾಕುವಂತಿದೆ ಎಂದು ಕಂಡು ಬಂದ ಆಧಾರದಲ್ಲಿ ಅವರ ವಿರುದ್ಧ ಕೇಸು ದಾಖಲಿಸಲು ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ಕೊಲ್ಲಂ ರೂರಲ್ ಎಸ್ಪಿಗೆ ಸೂಚನೆ ನೀಡಿದ್ದರು ಎಂದು ವರದಿ ತಿಳಿಸಿದೆ.

 ಪತ್ತನಾಪುರಂದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಬಾಲಕೃಷ್ಣ ಪಿಳ್ಳೆ ಮಸೀದಿಯ ಆಝಾನ್ ಸಹಿತ ಇತರ ಧರ್ಮೀಯರ ಕುರಿತು ಅನೇಕ ಆಕ್ಷೇಪಾರ್ಹ ಮಾತುಗಳನ್ನು ತಮ್ಮ ಭಾಷಣದಲ್ಲಿ ಆಡಿದ್ದು ಖಚಿತ ಗೊಂಡ ಹಿನ್ನೆಲೆಯಲ್ಲಿ ಐಪಿಸಿ ಖಲಂ 153 ಪ್ರಕಾರ ಕೇಸು ದಾಖಲಿಸಿಕೊಳ್ಳಲು ಡಿಜಿಪಿ ಬೆಹ್ರಾ ಸೂಚಿಸಿದ್ದಾರೆ. ಅಲ್ಲದೆ ಬೇರೆ ಖಲಂಗಳನ್ನು ಹೊರಿಸಬೇಕಾದ ಆವಶ್ಯಕತೆ ಇದೆಯೇ ಎಂದು ಪರಿಶೀಲಿಸಲು ಕೂಡಾ ಪೊಲೀಸರಿಗೆ ತಿಳಿಸಿದ್ದಾರೆಎನ್ನಲಾಗಿದೆ. ತನ್ನ ಭಾಷಣ ವಿವಾದವಾದ ನಂತರ ಪಿಳ್ಳೆ ವಿಷಾದ ಸೂಚಿಸಿದ್ದರು. ಪೊಲೀಸರ ತನಿಖೆಗೆ ಸಂಪೂರ್ಣ ಸಹಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

"ಆಝಾನ್ ನೀಡುವಾಗ ಸಮೀಪದ ಇತರ ದೇವಾಲಯಗಳು ಮೈಕ್ ಬಂದ್ ಮಾಡಬೇಕು. ಅದು ರೀತಿ. ಹತ್ತು ಮುಸ್ಲಿಮರೋ ಕ್ರೈಸ್ತರೋ ಒಂದೆಡೆ ವಾಸಿಸುತ್ತಿದ್ದರೆ ಅಲ್ಲಿ ಮಸೀದಿ, ಚರ್ಚ್ ಕಟ್ಟುತ್ತಾರೆ. ಹಿಂದೆಲ್ಲ ಒಂದು ಪ್ರದೇಶದಲ್ಲಿ ಒಂದು ಕ್ರೈಸ್ತ ಚರ್ಚ್ ಇರುತ್ತಿತ್ತು. ಆದರೆ ಇಂದು ಎಲ್ಲಿನೋಡಿದರೂ ಚರ್ಚ್‌ಗಳೇ ಇವೆ.

   ಮುಸ್ಲಿಮ್ ಯುವತಿಯರನ್ನು ಮಸೀದಿಗೆ ಹೋಗಗೊಡದಿರುವುದು ಸರಿಯೇ? ಹಾಗೇ ಅವರು ಮಸೀದಿಗೆ ಬಂದರೆ ಕೊರಳನ್ನು ಕೊಯ್ಯಲಾಗುತ್ತದೆ. ಶಬರಿಮಲೆ ವಿಷಯದಲ್ಲಿ ಆಚಾರ್ಯರು, ತಂತ್ರಿಗಳು ಹೇಳಿದ ವಿಷಯ ಸರಿಯಲ್ಲ ಎಂದು ನ್ಯಾಯಾಧೀಶ ಕುರಿಯನ್ ಜೋಸೆಫ್ ಹೇಳಿದರೆ ಅದು ಕೂಡಾ ಸರಿಯಾಗುವುದಿಲ್ಲ. ವಿಶ್ವಾಸಕ್ಕಾಗಿ ಈಗ ಕೊರಳು ಕೊಯ್ಯಲಾಗುತ್ತಿದೆ... ಹೀಗೆ ಪಿಳ್ಳೆ ತನ್ನ ವಿವಾದಾಸ್ಪದ ಭಾಷಣದ ಧ್ವನಿ ಮುದ್ರಿಕೆಯಲ್ಲಿ ಹೇಳುತ್ತಾ ಹೋಗುತ್ತಾರೆ ಎಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News