ಯೋಗದಲ್ಲಿ ಉನ್ನತ ಅಂಕ ಗಳಿಸಿದ್ದಕ್ಕೆ ಅತ್ಯಾಚಾರಿಗೆ ಅವಧಿಗೆ ಮೊದಲೇ ಬಿಡುಗಡೆ ಭಾಗ್ಯ !
ನಾಗ್ಪುರ, ಆ.5: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿಯೊಬ್ಬ ತನ್ನ ಜೈಲು ಶಿಕ್ಷೆಯ ಅವಧಿ ಮುಗಿಯುವ 40 ದಿನಗಳ ಮುನ್ನವೇನಾಗ್ಪುರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯ ಭಾಗ್ಯ ಹೊಂದಿದ್ದಾನೆ. ಆತ ಯೋಗ ಪರೀಕ್ಷೆಯಲ್ಲಿಉನ್ನತ ಅಂಕ ಗಳಿಸಿದ್ದೇ ಇದಕ್ಕೆ ಕಾರಣ. ಮಹಾರಾಷ್ಟ್ರ ಸರಕಾರದ ಬಂದೀಖಾನೆ ಇಲಾಖೆಯ ವಿಶೇಷ ಯೋಜನೆಯಂತೆ ಯೋಗ ಪರಿಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಕೈದಿಗಳು ಅವಧಿಗೆ ಮುನ್ನ ಬಿಡುಗಡೆಗೆ ಮನವಿ ಮಾಡಬಹುದಾಗಿದೆ.
ಈ ಯೋಜನೆಯಡಿಯಲ್ಲಿ ಬಿಡುಗಡೆ ಭಾಗ್ಯ ಕಂಡಿರುವ ಮೊದಲ ಅಪರಾಧಿಯಾಗಿರುವ ಶೀತಲ್ ಕವಾಲೆಯನ್ನು 2012 ರಲ್ಲಿ ನಾಗ್ಪುರದ ನ್ಯಾಯಾಲಯವೊಂದು ತನ್ನ ಸಂಬಂಧಿಯೊಬ್ಬಳ ಅತ್ಯಾಚಾರಗೈದ ಪ್ರಕರಣದಲ್ಲಿ ದೋಷಿಯೆಂದು ತೀರ್ಮಾನಿಸಿತ್ತು. ‘‘ಜೈಲಿನಲ್ಲಿ ಯೋಗಾಭ್ಯಾಸದಲ್ಲಿ ಉತ್ತಮ ನಿರ್ವಹಣೆ ತೋರಿದ ಕವಾಲೆ ಕಳೆದ ವಾರ ಬಿಡುಗಡೆ ಹೊಂದಿದ್ದಾನೆ ಹಾಗೂ ಆತನ ಶಿಕ್ಷೆಯ ಅವಧಿ 40 ದಿನಗಳಷ್ಟು ಕಡಿಮೆಗೊಳಿಸಲಾಗಿದೆ,’’ಎಂದು ಕೇಂದ್ರ ಕಾರಾಗೃಹದ ಸುಪರಿಂಟೆಂಡೆಂಟ್ ಯೋಗೇಶ್ ದೇಸಾಯಿ ತಿಳಿಸಿದ್ದಾರೆ.
ಆದರೆ ಬಂದೀಖಾನೆ ಇಲಾಖೆಯ ಈ ಯೋಜನೆಯು ಉಗ್ರವಾದ ಹಾಗೂ ಮಾದಕ ವಸ್ತು ಸಂಬಂಧಿತ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರಿಗೆ ಅನ್ವಯಿಸುವುದಿಲ್ಲ.
ಈ ಯೋಜನೆಯನ್ವಯ ಯೋಗದ ಪ್ರಥಮ ಪರೀಕ್ಷೆಯನ್ನು ಈ ವರ್ಷದ ಮೇ-ಜೂನ್ ಮಧ್ಯೆ ನಡೆಸಲಾಗಿದ್ದು ಜುಲೈ ಅಂತ್ಯದಲ್ಲಿ ಫಲಿತಾಂಶ ಪ್ರಕಟವಾಗಿತ್ತು.