2 ಕೋಟಿ ರೂ. ವೆಚ್ಚದಲ್ಲಿ ಪೌರ ಕಾರ್ಮಿಕರ ಭವನ: ನಾರಾಯಣ
ಮಂಗಳೂರು, ಆ.5: ಪೌರ ಕಾರ್ಮಿಕರಿಗೆ ಮದುವೆ, ಸಮ್ಮೇಳನ, ಸಾಂಸ್ಕೃತಿಕ ಸೇರಿದಂತೆ ಸಾಮೂಹಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಮಣ್ಣಗುಡ್ಡದಲ್ಲಿ ಲಭ್ಯವಿರುವ ಮಹಾನಗರ ಪಾಲಿಕೆಯ ಜಾಗದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಪೌರ ಕಾರ್ಮಿಕರ ಭವನ ನಿರ್ಮಿಸಲಾಗುವುದು ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ನಾರಾಯಣ ತಿಳಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಪೌರ ಕಾರ್ಮಿಕರ ಕುಂದುಕೊರತೆಗಳ ಕುರಿತು ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಮಣ್ಣಗುಡ್ಡದ ಪೌರ ಕಾರ್ಮಿಕರ ವಸತಿಗೃಹಗಳು ಅತ್ಯಂತ ಕಿರಿದಾಗಿದ್ದು, ಸಾಮೂಹಿಕ ಕಾರ್ಯಕ್ರಮಗಳಿಗೆ ವ್ಯವಸ್ಥೆ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಅಲ್ಲಿ ಲಭ್ಯವಿರುವ ಜಮೀನಿನಲ್ಲಿ ನಗರ ಪಾಲಿಕೆ 1 ಕೋಟಿ ರೂ. ಹಾಗೂ ಸರಕಾರದಿಂದ 1 ಕೋಟಿ ರೂ.ಗಳನ್ನು ಒದಗಿಸಿ ಬಹುಪಯೋಗಿ ಸುಸಜ್ಜಿತ ಭವನ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಂದಾಜುಪಟ್ಟಿ ತಯಾರಿಸಿ ಸರಕಾರಕ್ಕೆ ಪ್ರಸ್ತಾವನೆಯನ್ನು ಶೀಘ್ರವೇ ಸಲ್ಲಿಸಲ್ಲಿಸಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಮಣ್ಣಗುಡ್ಡದ ಕಚ್ಚಾ ಮನೆಗಳನ್ನು ಪಕ್ಕಾ ಮನೆಯನ್ನಾಗಿಸಲು ಕ್ರಮ
ಮಣ್ಣಗುಡ್ಡದ ಪೌರ ಕಾರ್ಮಿಕರ ಕಾಲನಿಯಲ್ಲಿರುವ ಮನೆಗಳು ಶಿಥಿಲಾವಸ್ಥೆಯಲ್ಲಿವೆ. ಸೂಕ್ತ ಮೂಲಭೂತ ಸೌಕರ್ಯಗಳ ಕೊರತೆ ಇರುವುದು ಇಂದು ಆ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಗಮನಕ್ಕೆ ಬಂದಿದೆ. ನಗರ ಪಾಲಿಕೆಯಿಂದ ಅಲ್ಲಿರುವ ಕಚ್ಚಾ ಮನೆಗಳನ್ನು ಪಕ್ಕಾ ಮನೆಗಳಾಗಿ ಪರಿವರ್ತಿಸಿ ಮೂಲಭೂತ ಸೌಲಭ್ಯ ಒದಗಿಸಲು ಸೂಚಿಸಲಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಕರ್ತವ್ಯದಲ್ಲಿರುವ ದಿನಕೂಲಿ ಪೌರಕಾರ್ಮಿಕರ ಖಾಯಮಾತಿ
ಪೌರ ಕಾರ್ಮಿಕರಿಗಾಗಿ ಹಲವಾರು ಸೌಲಭ್ಯಗಳನ್ನು ಒದಗಿಸುವ ರಾಜ್ಯ ಸರಕಾರ, ಐತಿಹಾಸಿಕ ಕ್ರಮವೊಂದಕ್ಕೆ ಮುಂದಾಗಿದೆ. ರಾಜ್ಯದ 35,000 ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಸರಕಾರ ಮುಂದಾಗಿದ್ದು, ಇದರಿಂದ ದ.ಕ. ಜಿಲ್ಲೆಯ ದಿನಕೂಲಿ ಪೌರ ಕಾರ್ಮಿಕರು ಕೂಡಾ ಖಾಯಂ ಅವಕಾಶವನ್ನು ಪಡೆಯಲಿದ್ದಾರೆ ಎಂದು ನಾರಾಯಣ ತಿಳಿಸಿದರು.
ಪೌರ ಕಾರ್ಮಿಕರು ನಿರ್ವಹಿಸುವ ನೈರ್ಮಲ್ಯ ಕಾರ್ಯವನ್ನು ಗಮನದಲ್ಲಿಟ್ಟುಕೊಂಡು ಇಲಾಖೆಯು ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಿ, ಹಾಲಿ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಈ ನಿಯಮಗಳಡಿ ನೇಮಕಾತಿ ಮಾಡಲು ಸಚಿವ ಸಂಪುಟ ಇಲಾಖೆಗೆ ಸೂಚಿಸಿದೆ. ಈ ಪ್ರಕ್ರಿಯೆಯನ್ನು 2017ರ ಮಾರ್ಚ್‌ನೊಲಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದ್ದು, ಅಲ್ಲಿಯವರೆಗೆ ಹೊರಗುತ್ತಿಗೆ ಮುಂದುವರಿಯಲಿದೆ. ಬಳಿಕ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಖಾಯಮಾತಿ ಆಗಲಿದೆ. ಇದರ ಜತೆಯಲ್ಲೇ ಪೌರ ಕಾರ್ಮಿಕರಿಗೆ ಆರೋಗ್ಯ ಭದ್ರತೆಯನ್ನು ಒದಗಿಸಲು ಯೋಜನೆ ರೂಪಿಸಲು ಸಚಿವ ಸಂಪುಟ ತೀರ್ಮಾನ ಆಗಿದೆ ಎಂದು ಆಯೋಗದ ಅಧ್ಯಕ್ಷ ನಾರಾಯಣ ತಿಳಿಸಿದರು.
ಮಾಸಿಕ 3,000 ರೂ. ಸಂಕಷ್ಟ ಭತ್ತೆ
ಹೊರಗುತ್ತಿಗೆ ನೌಕರರಿಗೆ ವೇತನ ನೀಡುವ ಹಿನ್ನೆಲೆಯಲ್ಲಿ ಎಸ್ಕ್ರೌಡ್ ಅಕೌಂಟ್ ತೆರೆದು ಕಾರ್ಮಿಕರ ಎರಡು ತಿಂಗಳ ವೇತನವನ್ನು ಸಂಕಷ್ಟ ಭತ್ತೆ ಸೇತ ಮುಂಗಡವಾಗಿ ಕಾಯ್ದಿರಿಸುವ ವ್ಯವಸ್ಥೆ ಹಿಂದೆ ಜಾರಿಯಲ್ಲಿತ್ತು. ಇದೀಗ ಆ ನಿಯಮವನ್ನು ತಿದ್ದುಪಡಿ ಮಾಡಿ ಕಾರ್ಮಿಕರಿಗೆ ನೀಡುವ ವೇತನದೊಂದಿಗೆ ಮಾಸಿಕ ತಲಾ 3,000 ರೂ. ಸಂಕಷ್ಟ ಭತ್ತೆಯನ್ನು ನೀಡಲು ಸರಕಾರ ತೀರ್ಮಾನಿಸಿದೆ ಎಂದು ಆಯೋಗದ ಅಧ್ಯಕ್ಷ ನಾರಾಯಣ ತಿಳಿಸಿದರು.
ರಾಜ್ಯ ಪೌರ ಕಾರ್ಮಿಕ ಅಭಿವೃದ್ಧಿ ನಿಗಮ ಅಸ್ತಿತ್ವಕ್ಕೆ
ದಲಿತರ ಅಭಿವೃದ್ಧಿಗಾಗಿ ಸರಾಕರ ಸಾವಿರಾರು ಕೋಟಿರೂ.ಗಳನ್ನು ಖರ್ಚು ಮಾಡುತ್ತಿದ್ದರೂ ಅದರ ಪ್ರಯೋಜನ ಪೌರ ಕಾರ್ಮಿಕರಿಗೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ದೇಶದಲ್ಲೇ ಪ್ರಥಮವಾಗಿ ಪೌರ ಕಾರ್ಮಿಕ ಅಭಿವೃದ್ಧಿ ನಿಗಮ ಸ್ಥಾಪಿಸಲು ಮುಂದಾಗಿದ್ದು, ಪ್ರಕ್ರಿಯೆ ನಡೆದಿದೆ. ಕೇಂದ್ರದಿಂದ ಅನುಮತಿ ಆದೇಶವೂ ದೊರಕಿದೆ. ಮುಂದಿನ 15 ದಿನಗಳಲ್ಲೇ ನಿಗಮ ಅಸ್ತಿತ್ವಕ್ಕೆ ಬರಲಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ನಾರಾಯಣ ಹೇಳಿದರು. ನಿಗಮದ ಮೂಲಕ 50 ಕೋಟಿ ರೂ.ಗಳನ್ನು ಪೌರ ಕಾರ್ಮಿಕರ ಅಭಿವೃದ್ದಿಗಾಗಿ ಸರಕಾರ ಮೀಸಲಿರಿಸಲಿದೆ ಎಂದು ಅವರು ಹೇಳಿದರು.