ಸಹಾಯಕ ಕಮೀಷನರ್‌ರಿಂದ ಸುಳ್ಯದಲ್ಲಿ ಅಹವಾಲು ಸ್ವೀಕಾರ
ಸುಳ್ಯ, ಆ.5: ಪುತ್ತೂರು ಸಹಾಯಕ ಕಮೀಷನರ್ ಡಾ.ರಾಜೇಂದ್ರ ಪ್ರತಿ ಶುಕ್ರವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸುಳ್ಯ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.
ಶುಕ್ರವಾರ ಬೆಳಗ್ಗೆ ತಾಲೂಕು ಕಚೇರಿಯಲ್ಲಿ ಇಲಾಖೆಯ ಸಿಬ್ಬಂದಿ ವರ್ಗದ ಸಭೆ ಕರೆದ ಅವರು, ಕಚೇರಿಯ ಅಶುಚಿತ್ವದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಶೌಚಾಲಯಗಳ ನಿರ್ವಹಣೆ ಸರಿಯಾಗಿಲ್ಲದ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಒಂದು ವಾರದ ಸಿಸಿ ಟಿವಿ ಫೂಟೇಜನ್ನು ತಾನು ಖುದ್ದು ವೀಕ್ಷಿಸಿದ್ದು, ಅವರು-ಇವರು, ಆ ಪಕ್ಷ-ಈ ಪಕ್ಷ ಎಂದು ಬಹಳಷ್ಟು ಜನ ನಿತ್ಯ ಕಚೇರಿಗೆ ಬಂದು ತೊಂದರೆ ನೀಡುತ್ತಿದ್ದಾರೆ. ಕೇಸ್ ವರ್ಕರ್‌ಗಳಿಗೆ ದಬ್ಬಾಳಿಕೆ ನಡೆಸುವುದು, ಕೂಗಾಡುವುದು, ಬಯ್ಯುವುದು ಗಮನಕ್ಕೆ ಬಂದಿದೆ. ಕಚೇರಿಯಲ್ಲಿ ಬ್ರೋಕರ್‌ಗಳಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದರು. ಯಾವುದೇ ಒತ್ತಡಕ್ಕೆ ಮಣಿದು ಕೆಲಸ ಮಾಡಬೇಡಿ. ಕಾನೂನು ಪ್ರಕಾರ ಆಗುವ ಕೆಲಸ ಮಾಡಿ. ಬಡವರಿಗೆ ಮಾನವೀಯತೆ ತೋರಿಸಿ, ಅವರನ್ನು ವಿನಾ ಕಾರಣ ಅಲೆದಾಡಿಸಬೇಡಿ. ಮಹಿಳಾ ಸಿಬ್ಬಂದಿಯ ರಕ್ಷಣೆಗೆ ಸಮಿತಿಯನ್ನು ರಚಿಸಿ. ಪ್ರತಿ ವಾರ ಸಮಿತಿ ಸಭೆ ನಡೆಸಿ ಅದರ ವರದಿ ಕಳುಹಿಸಿ ಎಂದವರು ಹೇಳಿದರು.
ತಾಲೂಕು ಕಚೇರಿಯಲ್ಲಿ ಲಂಚ ಕೇಳುತ್ತಿರುವ ಬಗ್ಗೆ ಪ್ರತಿ ದಿನ ಮೂರು-ನಾಲ್ಕು ಅರ್ಜಿಗಳು ತನಗೆ ಬರುತ್ತಿವೆ. ಯಾರೂ ನೇರವಾಗಿ ದೂರು ನೀಡುತ್ತಿಲ್ಲ. ಯಾರೇ ಲಂಚ ಕೇಳಿದರೂ ನೇರವಾಗಿ ಅಧಿಕಾರಿಯ ಹೆಸರು ಸಹಿತ ದೂರು ನೀಡಿ. ಅಂತಹವರ ಮೇಲೆ ಕ್ರಮ ಕೈಗೊಳ್ಳುತ್ತೇನೆ. ತಾಲೂಕು ಕಚೇರಿಯಲ್ಲಿ ಮೂವರು ಸಿಬ್ಬಂದಿ ಕುರಿತು ಸಾಕಷ್ಟು ದೂರುಗಳು ಬಂದಿವೆ. ಅವರ ಮೇಲೆ ಕ್ರಮ ಕೈಗೊಳ್ಳುವ ಕುರಿತು ಪರಿಶೀಲಿಸಲಾಗುತ್ತದೆ ಎಂದವರು ಹೇಳಿದರು.
ಉಪ ಖಜಾನೆ ಸ್ಥಳಾಂತರ ಹಾಗೂ ಆಹಾರ ಶಾಖೆಯನ್ನು ಮಿನಿ ವಿಧಾನಸೌಧ ಕಟ್ಟಡಕ್ಕೆ ಸ್ಥಳಾಂತರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಣ್ಣೇಗೌಡರಿಗೆ ಸೂಚನೆ ನೀಡಿದರು. ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಶೌಚಾಲಯದ ನಿರ್ಮಾಣ ಏಕೆ ಆಗಿಲ್ಲ? ಉಪ ಖಜಾನೆಗೆ ಬೇಕಾದ ಗಾರ್ಡ್ ರೂಂ ವ್ಯವಸ್ಥೆಯನ್ನು ತಕ್ಷಣ ಮಾಡಬೇಕು. ಆಹಾರ ಶಾಖೆಯನ್ನು ತಕ್ಷಣ ಸ್ಥಳಾಂತರಿಸಬೇಕು. ಲಿಫ್ಟ್ ವ್ಯವಸ್ಥೆಗೆ ಅಂದಾಜು ಪಟ್ಟಿ ತಯಾರಿಸಬೇಕು. ಕಚೇರಿ ಒಳಗಿನ ಶೌಚಾಲಯಗಳು ಸರಿಯಾಗಿ ಕೆಲಸ ಮಾಡುವಂತೆ ವ್ಯವಸ್ಥೆ ಮಾಡಬೇಕು ಎಂದವರು ಸೂಚನೆ ನೀಡಿದರು.
ಮ್ಯುಟೇಶನ್‌ಗೆ ಕೇಸ್ ವರ್ಕರ್ ಒಬ್ಬರು 60 ಸಾವಿರ ರೂ.ಲಂಚ ಕೇಳಿದ್ದಾಗಿ ಮಾಜಿ ಶಾಸಕ ಕೆ. ಕುಶಲ ಸಹಾಯಕ ಕಮೀಷನರ್‌ಗೆ ದೂರು ನೀಡಿದ ಘಟನೆ ನಡೆಯಿತು. ಈ ಕುರಿತು ಎಸಿಯವರು ಕೇಸ್ ವರ್ಕರ್‌ರನ್ನು ಕರೆದು ವಿಚಾರಿಸಿದರು. ಹಲವು ಮಂದಿ ತಮ್ಮ ವೈಯಕ್ತಿಕ ಸಮಸ್ಯೆಗಳ ಕುರಿತು ದೂರು ನೀಡಿದರು.