×
Ad

ಪುತ್ತೂರಿನಲ್ಲಿ ಹೆಚ್ಚುವರಿ ಶಿಕ್ಷಕರಿಗೆ ಕೌನ್ಸಿಲಿಂಗ್

Update: 2016-08-05 17:44 IST

ಪುತ್ತೂರು, ಆ.5: ಹೆಚ್ಚುವರಿ ಶಿಕ್ಷಕರ ತಾಲೂಕು ಮಟ್ಟದ ಕೌನ್ಸೆಲಿಂಗ್ ಶುಕ್ರವಾರ ಸಂಜೆ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಳಿಯ ಗುರುಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್.ರ ಅಧ್ಯಕ್ಷತೆಯಲ್ಲಿ ನಡೆಯಿತು. ತಾಲೂಕಿನ ವಿವಿಧ ಶಾಲೆಗಳ 40 ಶಿಕ್ಷಕ, ಶಿಕ್ಷಕಿಯರು ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಿ ಪಟ್ಟಿಯಲ್ಲಿರುವ ಶಾಲೆಗಳ ಪೈಕಿ ತಮಗೆ ಬೇಕಾದ ಶಾಲೆಗಳನ್ನು ಆರಿಸಿಕೊಂಡರು.

ಜುಲೈ 19ರಂದು ಮೊದಲ ಹಂತದ ಕೌನ್ಸೆಲಿಂಗ್ ಪ್ರಕ್ರಿಯೆ ನಡೆದಿತ್ತಾರೂ, ನಂತರ ರಾಜ್ಯ ಸಚಿವ ಸಂಪುಟ ಮಲೆನಾಡು ಯೋಜನೆ ಜಾರಿಗೆ ತರಲು ನಿರ್ಧರಿಸಿದ ಕಾರಣ ಆ ಕೌನ್ಸೆಲಿಂಗ್‌ನ ತೀರ್ಮಾನಗಳನ್ನು ರದ್ದು ಮಾಡಲಾಗಿತ್ತು.

ಮೊದಲ ಹಂತದ ಹೆಚ್ಚುವರಿ ಶಿಕ್ಷಕರ ಆಯ್ಕೆ ಪ್ರಕ್ರಿಯೆಯಲ್ಲಿ ಪುತ್ತೂರು ತಾಲೂಕಿನಲ್ಲಿ ಮುಖ್ಯ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರನ್ನು ಹೊರತುಪಡಿಸಿ 53 ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಲಾಗಿತ್ತು. ಹೊಸದಾಗಿ ಜಾರಿಗೆ ಬಂದ ಮಲೆನಾಡು ಯೋಜನೆಗಳ ಪ್ರಕಾರ 13 ಶಿಕ್ಷಕರು ಆಯಾ ಶಾಲೆಗಳಲ್ಲೇ ಉಳಿದುಕೊಂಡಿದ್ದು, 40 ಶಿಕ್ಷಕರನ್ನು ಮಾತ್ರ ಹೆಚ್ಚುವರಿ ಎಂದು ಗುರುತಿಸಲಾಗಿತ್ತು. ಈ 13 ಶಿಕ್ಷಕರ ಕೌನ್ಸೆಲಿಂಗ್ ರದ್ದಾದ ಕಾರಣ ವರ್ಗಾವಣೆ ಆಗುವ ಶಿಕ್ಷಕರಿಗೆ ಆಯ್ಕೆ ಮಾಡಲು 13 ಶಾಲೆಗಳು ಹೆಚ್ಚುವರಿಯಾಗಿ ಸಿಗುವ ಕಾರಣ ಹೊಸದಾಗಿ ಕೌನ್ಸೆಲಿಂಗ್ ನಡೆಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕರಾದ ಲಕ್ಷ್ಮೀದೇವಿ, ಪ್ರಥಮ ದರ್ಜೆ ಸಹಾಯಕ ಚೆನ್ನ ನಾಯ್ಕ, ಶಿಕ್ಷಣ ಸಂಯೋಜಕ ಕುಕ್ಕ, ಶಿಕ್ಷಕರ ಸಂಘದ ರಾಮಕೃಷ್ಣ ಮಲ್ಲಾರ ಮುಂತಾದವರು ಉಪಸ್ಥಿತರಿದ್ದರು.

ಸರ್ವ ಶಿಕ್ಷ ಅಭಿಯಾನದ ಅಡಿಯಲ್ಲಿ ನೇಮಕಗೊಂಡ ಶಿಕ್ಷಕರಿಬ್ಬರನ್ನು ಹೆಚ್ಚುವರಿ ಎಂದು ಗುರುತಿಸಲಾಗಿದ್ದರೂ, ಅವರಿಗೆ ಬೇರೆ ಅಂಥದೇ ದರ್ಜೆಯ ಹುದ್ದೆ ಎಲ್ಲೂ ಖಾಲಿ ಇಲ್ಲದೇ ಇರುವ ಕಾರಣ ಈ ಶಿಕ್ಷಕರು ಬೇರೆ ತಾಲೂಕುಗಳ ಶಾಲೆಗಳನ್ನು ಆಯ್ಕೆ ಮಾಡಬೇಕಾಗುತ್ತದೆ ಎಂಬ ಅಂಶ ಸಬೆಯಲ್ಲಿ ಬೆಳಕಿಗೆ ಬಂತು. ಇದಕ್ಕಾಗಿ ಅವರು ಜಿಲ್ಲಾ ಮಟ್ಟದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ನಿರ್ಧರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News