×
Ad

ಗುಜರಾತ್:ನ್ಯಾಯಕ್ಕಾಗಿ ಆಗ್ರಹಿಸಿ ‘ದಲಿತ ಅಸ್ಮಿತಾ ಯಾತ್ರಾ’ ಆರಂಭ

Update: 2016-08-05 18:08 IST

ಅಹ್ಮದಾಬಾದ್,ಆ.5: ಉನಾದಲ್ಲಿ ಸತ್ತ ದನವೊಂದರ ಚರ್ಮವನ್ನು ಸುಲಿದಿದ್ದಕ್ಕಾಗಿ ಗೋರಕ್ಷಕರ ಗುಂಪೊಂದು ನಾಲ್ವರು ದಲಿತ ಯುವಕರನ್ನು ಅಮಾವೀಯವಾಗಿ ಥಳಿಸಿದ್ದ ಘಟನೆಯ ಹಿನ್ನೆಲೆಯಲ್ಲಿ ತಮ್ಮ ಸಮುದಾಯಕ್ಕೆ ನ್ಯಾಯಕ್ಕಾಗಿ ಆಗ್ರಹಿಸಿ ನೂರಾರು ದಲಿತರು ಮತ್ತು ವಿವಿಧ ನಾಗರಿಕ ಹಕ್ಕುಗಳ ಸಂಘಟನೆಗಳ ಸದಸ್ಯರು ಶುಕ್ರವಾರ ಇಲ್ಲಿಯ ವೇಜಲಪುರ ಪ್ರದೇಶದಿಂದ 380 ಕಿ.ಮೀ.ದೂರದ ಗಿರ್ ಸೋಮನಾಥ ಜಿಲ್ಲೆಯ ಉನಾಕ್ಕೆ ಕಾಲ್ನಡಿಗೆಯ ‘ದಲಿತ ಅಸ್ಮಿತಾ ಯಾತ್ರಾ’ವನ್ನು ಆರಂಭಿಸಿದರು.
ಸುಮಾರು 800ರಷ್ಟು ಜನರು ಯಾತ್ರೆಯಲ್ಲಿ ಭಾಗಿಯಾಗಿದ್ದು, ಸ್ವಾತಂತ್ರೋತ್ಸವ ದಿನವಾದ ಆ.15ರಂದು ಉನಾಪಟ್ಟಣದಲ್ಲಿ ಸೇರಲಿದ್ದಾರೆ. ಅಂದು ಅಲ್ಲಿ ದಲಿತರು ಧ್ವಜಾರೋಹಣವನ್ನು ನಡೆಸಲಿದ್ದಾರೆ.
ದೇಶಾದ್ಯಂತದ ದಲಿತರನ್ನು ಶತಮಾನಗಳಷ್ಟು ಹಳೆಯದಾದ ಸಂಪ್ರದಾಯಗಳಿಂದ ವಿಮೋಚನೆಗೊಳಿಸುವ ನಿಟ್ಟಿನಲ್ಲಿ ಈ ಪಾದಯಾತ್ರೆ ಮೊದಲ ಹೆಜ್ಜೆಯಾಗಿದೆ. ಸರಕಾರಕ್ಕೆ ಪ್ರಬಲ ಸಂದೇಶವೊಂದನ್ನು ರವಾನಿಸಲು ಸತ್ತ ಪ್ರಾಣಿಗಳನ್ನು ವಿಲೇವಾರಿಗೊಳಿಸುವ ತಮ್ಮ ಪೂರ್ವಜರ ಕಸುಬನ್ನು ತೊರೆಯುವಂತೆ ನಾವು ಉನಾಕ್ಕೆ ತೆರಳುವ ಮಾರ್ಗದುದ್ದಕ್ಕೂ ದಲಿತರನ್ನು ಕೋರಲಿದ್ದೇವೆ ಎಂದು ಪಾದಯಾತ್ರೆಯ ಸಂಘಟಕರಲ್ಲೊಬ್ಬರಾದ ಜಿಗ್ನೇಶ್ ಮೇವಾನಿ ಸುದ್ದಿಗಾರರಿಗೆ ತಿಳಿಸಿದರು.
ಹತ್ತು ದಿನಗಳ ಈ ಪಾದಯಾತ್ರೆಯಲ್ಲಿ ಸಮುದಾಯದ ಸದಸ್ಯರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ದಲಿತ ನಾಯಕರು ಹಲವಾರು ಸಣ್ಣ ಸಮಾವೇಶಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News