ಫಾದರ್ ಮುಲ್ಲರ್ ಆಸ್ಪತ್ರೆ ಪ್ರಯೋಗಾಲಯಕ್ಕೆ ಸತತ 3 ಬಾರಿ ಎನ್‌ಎಬಿಎಲ್ ಮಾನ್ಯತೆ: ಸಂಭ್ರಮಾಚರಣೆ

Update: 2016-08-05 14:16 GMT

ಮಂಗಳೂರು,ಆ.5: ನಗರದ ಫಾದರ್ ಮುಲ್ಲರ್ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯ ಪ್ರಯೋಗಾಲಯಕ್ಕೆ ರಾಷ್ಟ್ರೀಯ ಪ್ರಯೋಗಾಲಯಗಳ ಪರೀಕ್ಷೆ ಮತ್ತು ಮಾಪನಾಂಕ ಮಾನ್ಯತಾ ಸಂಸ್ಥೆ (ಎನ್‌ಎಬಿಎಲ್)ಯ ಮಾನ್ಯತೆಯು ನಿರಂತರವಾಗಿ ಮೂರನೆ ಬಾರಿಗೆ ದೊರೆತಿರುವ ಹಿನ್ನೆಲೆಯಲ್ಲಿ ಇಂದು ಆಸ್ಪತ್ರೆಯ ಕಾನ್ಪರೆನ್ಸ್ ಸಭಾಂಗಣದಲ್ಲಿ ಸಂಭ್ರಮಾಚರಣೆಯನ್ನು ನಡೆಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಫ್‌ಎಂಸಿಐ ನಿರ್ದೇಶಕ ರೆ.ಫಾ. ಪ್ಯಾಟ್ರಿಕ್ ರೋಡ್ರಿಗಸ್, ಸಂಸ್ಥೆಯು ಮೂರನೆ ಬಾರಿಗೆ ರಾಷ್ಟ್ರೀಯ ಪ್ರಯೋಗಾಲಯಗಳ ಪರೀಕ್ಷೆ ಮತ್ತು ಮಾಪನಾಂಕ ಮಾನ್ಯತಾ ಸಂಸ್ಥೆಯ ಮಾನ್ಯತಾ ಪತ್ರವನ್ನು ಪಡೆಯಲು ಸಿಬ್ಬಂದಿಯ ಬದ್ಧತೆಯೆ ಮೂಲ ಕಾರಣ. ಆಧುನಿಕ ಸಲಕರಣೆಗಳಿದ್ದರೂ ಸಿಬ್ಬಂದಿಗೆ ಬದ್ದತೆಯಿಲ್ಲದಿದ್ದರೆ ಇಂತಹ ಸಾಧನೆ ಮಾಡಲು ಅಸಾಧ್ಯ. ಈ ಸಾಧನೆಯ ಹಿರಿಮೆ ಎಲ್ಲ ಸಿಬ್ಬಂದಿಗೆ ಸಲ್ಲುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರೆ.ಫಾ. ರಿಚರ್ಡ್ ಅಲೋಷಿಯಸ್ ಕುವೆಲಲೊ, ರಾಷ್ಟ್ರೀಯ ಪ್ರಯೋಗಾಲಯಗಳ ಪರೀಕ್ಷೆ ಮತ್ತು ಮಾಪನಾಂಕ ಮಾನ್ಯತಾ ಸಂಸ್ಥೆಯ ಮಾನ್ಯತೆಯನ್ನು ಒಮ್ಮೆ ಪಡೆಯುವುದೆಂದರೆ ಅದು ಅಲ್ಲಿಗೆ ನಿಲ್ಲುವುದಿಲ್ಲ. ಪ್ರತಿ ಎರಡು ವರ್ಷಕ್ಕೊಮ್ಮೆ ಮಾನ್ಯತೆಯನ್ನು ಪಡೆಯಬೇಕಾಗುತ್ತದೆ. ಮುಂದಿನ ಬಾರಿಯೂ ಮಾನ್ಯತೆಯನ್ನು ಪಡೆಯುವ ನಿಟ್ಟಿನಲ್ಲಿ ಮತ್ತೆ ಪ್ರಯತ್ನಿಸಬೇಕಾಗುತ್ತದೆ ಎಂದು ಹೇಳಿದರು.

ಎನ್‌ಎಬಿಎಲ್ ಮಾನ್ಯತಾ ಪತ್ರವನ್ನು ಸಂಸ್ಥೆಯ ನಿರ್ದೇಶಕರಿಗೆ ಪ್ರದಾನ ಮಾಡಲಾಯಿತು.

ಫಾದರ್ ಮುಲ್ಲರ್ ವೈದ್ಯಕೀಯ ಆಸ್ಪತ್ರೆಯ ಪ್ರಯೋಗಾಲಯದ ಗುಣಮಟ್ಟ ವ್ಯವಸ್ಥಾಪಕ ಡಾ.ಎ.ಆರ್.ಶಿವಂಶಕರ್, ಈ ಮಾನ್ಯತಾ ಪ್ರಕ್ರಿಯೆ ನಡೆದು ಬಂದ ಹಾದಿಯನ್ನು ವಿವರಿಸಿದರು. ಫಾದರ್ ರುಡಾಲ್ಫ್ ರವಿ ಡೇಸಾ ಉಪಸ್ಥಿತರಿದ್ದರು. ಎಫ್‌ಎಂಎಂಸಿ ಡೀನ್ ಡಾ.ಜಯಪ್ರಕಾಶ್ ಆಳ್ವ ಸ್ವಾಗತಿಸಿದರು. ಪ್ರಯೋಗಾಲಯ ನಿರ್ದೇಶಕ ಡಾ.ಉಮಾಶಂಕರ್ ವಂದಿಸಿದರು.

ದೇಶದಲ್ಲಿ ಪ್ರಯೋಗಾಲಯಗಳಿಗೆ ಮಾನ್ಯತೆ ನೀಡುವ ಏಕೈಕ ಸಂಸ್ಥೆ ಎನ್‌ಎಬಿಎಲ್

ನಗರದ ಫಾದರ್ ಮುಲ್ಲರ್ ವೈದ್ಯಕೀಯ ಜ್ಞಾನ ಆಸ್ಪತ್ರೆಯ ಪ್ರಯೋಗಾಲಯ (ಎಫ್‌ಎಂಎಂಸಿಎಚ್‌ಎಲ್) 2012ರಿಂದಲೂ ರಾಷ್ಟ್ರೀಯ ಪ್ರಯೋಗಾಲಯಗಳ ಪರೀಕ್ಷೆ ಮತ್ತು ಮಾಪನಾಂಕ ಮಾನ್ಯತಾ ಸಂಸ್ಥೆ (ಎನ್‌ಎಬಿಎಲ್)ನ ಮಾನ್ಯತೆ ಪಡೆದಿದೆ. ರಾಷ್ಟ್ರೀಯ ಪ್ರಯೋಗಾಲಯಗಳ ಪರೀಕ್ಷೆ ಮತ್ತು ಮಾಪನಾಂಕ ಮಾನ್ಯತಾ ಸಂಸ್ಥೆ (ಎನ್‌ಎಬಿಎಲ್) ಇಡೀ ದೇಶದಲ್ಲಿ ಪ್ರಯೋಗಾಲಯಗಳಿಗೆ ಮಾನ್ಯತೆ ನೀಡುವ ಏಕೈಕ ಸಂಸ್ಥೆಯಾಗಿದೆ.

ಭಾರತದಲ್ಲಿ ಈ ಮಾನ್ಯತಾ ಪ್ರಮಾಣಪತ್ರ ಪಡೆಯುವುದು ಸ್ವಯಂಪ್ರೇರಿತ ಪ್ರಕ್ರಿಯೆಯಾಗಿದ್ದು, ಇದು ಪ್ರಯೋಗಾಲಯಕ್ಕೆ ಅಧಿಕೃತ ಮಾನ್ಯತೆ, ಅಧಿಕಾರ ಹಾಗೂ ನೋಂದಣಿಯನ್ನು ಖಾತ್ರಿಪಡಿಸುತ್ತದೆ. ಇದರ ಜೊತೆಗೆ ಪ್ರಯೋಗಾಲಯದ ಸಾಮರ್ಥ್ಯ, ಸ್ಪರ್ಧಾತ್ಮಕತೆ ಹಾಗೂ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ.

ಫಾದರ್ ಮುಲ್ಲರ್ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯ ಪ್ರಯೋಗಾಲಯ (ಎಫ್‌ಎಂಎಂಸಿಎಚ್‌ಎಲ್) ಮಾನ್ಯತಾ ಪ್ರಕ್ರಿಯೆ 2010ರಿಂದಲೇ ಆರಂಭವಾಗಿದ್ದು, ಸಿಬ್ಬಂದಿ ತರಬೇತಿ, ಗುಣಮಟ್ಟದ ಮಾರ್ಗಸೂಚಿ ಸಿದ್ಧಪಡಿಸುವುದು ಹಾಗೂ ಎನ್‌ಎಬಿಐ ಮಾನ್ಯತೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ 2012ರಲ್ಲಿ ನಡೆಯಿತು.
ಗುಣಮಟ್ಟ ಕೈಪಿಡಿ ಸಮರ್ಪಕವಾಗಿದೆ ಎಂದು ಎನ್‌ಎಬಿಐ ನಿರ್ಧರಿಸಿದ ಬಳಿಕ, ಮೌಲ್ಯಮಾಪನ ಪೂರ್ವ ಪ್ರಕ್ರಿಯೆ ಇರುತ್ತದೆ. ಅಂತಿಮವಾಗಿ ಎನ್‌ಎಬಿಐ ತಂಡ ಪರಿಶೀಲನೆ ನಡೆಸುತ್ತದೆ. 2012ರ ಆಗಸ್ಟ್ 7ರಂದು ಫಾದರ್ ಮುಲ್ಲರ್ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯ ಪ್ರಯೋಗಾಲಯ (ಎಫ್‌ಎಂಎಂಸಿಎಚ್‌ಎಲ್) ಎನ್‌ಎಬಿಐ ಮಾನ್ಯತೆ ಪಡೆಯಿತು. ಈ ಪ್ರಯೋಗಾಲಯದ ಎಲ್ಲ ವಿಭಾಗಗಳಾದ ಕ್ಲಿನಿಕಲ್ ಬಯೊಕೆಮೆಸ್ಟ್ರಿ, ಹೆಮೆಟಾಲಜಿ, ಕ್ಲಿನಿಕಲ್ ಪೆಥಾಲಜಿ, ಸೈಟಾಲಜಿ, ಸ್ಟೊ ಫೆಥಾಲಜಿ ಹಾಗೂ ಮೈಕ್ರೊ ಬಯಾಲಜಿ ವಿಭಾಗಗಳು ಮಾನ್ಯತೆ ಪಡೆದಿವೆ.

ಆ ಬಳಿಕ ನಿರಂತರವಾಗಿ ಫಾದರ್ ಮುಲ್ಲರ್ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯ ಪ್ರಯೋಗಾಲಯ ತನ್ನ ತಪಾಸಣಾ ವರದಿಯಲ್ಲಿ ಗುಣಮಟ್ಟ, ವಿಶ್ಲೇಷಣಾ ವಿಧಾನ, ಗುಣಮಟ್ಟ ನಿಯಂತ್ರಣ, ಪ್ರಯೋಗಾಲಯ ಸುರಕ್ಷಾ ಕ್ರಮಗಳು, ಸಿಬ್ಬಂದಿ ತರಬೇತಿ ಹಾಗೂ ಬಳಕೆದಾರರ ಜತೆ ಪರಿಣಾಮಕಾರಿ ಸಂವಹನವನ್ನು ಕಾಪಾಡಿಕೊಂಡು ಬಂದಿದೆ. ಎನ್‌ಎಬಿಎಲ್‌ನ ಪರೀಕ್ಷಕರು, ಗುಣಮಟ್ಟ ನಿಯಂತ್ರಣ ನಿರ್ವಹಣಾ ವ್ಯವಸ್ಥೆ, ಸಿಬ್ಬಂದಿಯ ಸ್ಪರ್ಧಾತ್ಮಕತೆಯ ಗುಣಮಟ್ಟ, ತಾಂತ್ರಿಕ ಪ್ರಗತಿ, ಅಪಾಯ ಪರಿಸ್ಥಿತಿ ನಿರ್ವಹಣೆ, ಸುರಕ್ಷಾ ಕ್ರಮಗಳು ಮತ್ತು ಆಂತರಿಕ ಪರಿಶೋಧನಾ ಪ್ರಕ್ರಿಯೆ ಬಗ್ಗೆ ತಿಳಿಸಿರುತ್ತಾರೆ. ಪ್ರಯೋಗಾಲಯದ ಬಹುತೇಕ ಎಲ್ಲ ಸಿಬ್ಬಂದಿ ಐಎಸ್‌ಓ 15189 ಹಾಗೂ ಎನ್‌ಎಬಿಎಲ್-112 ಗುಣಮಟ್ಟದ ತರಬೇತಿಯನ್ನು ಪಡೆದಿದ್ದಾರೆ.

ಫಾದರ್ ಮುಲ್ಲರ್ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯ ಪ್ರಯೋಗಾಲಯ ದಿನದ 24 ಗಂಟೆಯೂ ಸೇವೆ ನೀಡುತ್ತಿದ್ದು, ಸಂಪೂರ್ಣ ತರಬೇತಿ ಪಡೆದ ಹಾಗೂ ಅನುಭವಿ ಸಿಬ್ಬಂದಿ, ಅತ್ಯಾಧುನಿಕ ಸ್ವಯಂಚಾಲಿತ ಪರಿಕರಗಳು ಹಾಗೂ ಅತ್ಯುನ್ನತ ತಂತ್ರಜ್ಞಾನವನ್ನು ಹೊಂದಿದೆ. ಫಾದರ್ ಮುಲ್ಲರ್ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯ ಪ್ರಯೋಗಾಲಯ ತನ್ನ ಬದ್ಧತೆ, ಸಮರ್ಪಣಾ ಮನೋಭಾವ, ಕೃಪೆ, ಸ್ಪರ್ಧಾತ್ಮಕತೆ ಹಾಗೂ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ.
2013ರಲ್ಲಿ ಮೊಟ್ಟಮೊದಲ ಬಾರಿಗೆ ಸರ್ವೇಕ್ಷಣಾ ಪರಿಶೋಧನೆ ನಡೆಸಲಾಗಿದ್ದು, 2014ರಲ್ಲೂ ಪ್ರಯೋಗಾಲಯದ ಮಾನ್ಯತೆ ಮುಂದುವರಿಯಿತು.

2014ರಲ್ಲಿ ಪ್ರಯೋಗಾಲಯವನ್ನು ಎನ್‌ಎಬಿಎಲ್ ತಂಡ ಮತ್ತೆಂದು ಮೌಲ್ಯಮಾಪನ ಪ್ರಕ್ರಿಯೆಗೆ ಒಳಪಡಿಸಿತು. ಇದೀಗ ಮೂರನೆ ಬಾರಿ ಕೂಡಾ ಫಾದರ್ ಮುಲ್ಲರ್ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯ ಪ್ರಯೋಗಾಲಯ (ಎಫ್‌ಎಂಎಂಸಿಎಚ್‌ಎಲ್) ಎನ್‌ಎಬಿಎಲ್ ಮಾನ್ಯತೆ ಪಡೆದಿದ್ದು, 2018ರ ಕೊನೆಯವರೆಗೂ ಇದು ಊರ್ಜಿತವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News