ಎಂಆರ್‌ಪಿಎಲ್‌ನಿಂದ ಹರಿದ ಮಾಲಿನ್ಯ ನೀರು: ಅಧಿಕಾರಿಗಳ ಎಚ್ಚರಿಕೆ
ಮಂಗಳೂರು, ಆ. 5: ಎಂಆರ್‌ಪಿಎಲ್ ಮೂರನೆ ಹಂತದ ಕೋಕ್ ಘಟಕದಿಂದ ಮತ್ತೆ ಮಾಲಿನ್ಯ ನೀರು ಸಾರ್ವಜನಿಕ ಸ್ಥಳಗಳಲ್ಲಿ ಹರಿಯಲು ಪ್ರಾಂರಭಿಸಿದ್ದು, ಇಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಾಜಶೇಖರ್ ಪುರಾಣಿಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಎಂಆರ್‌ಪಿಎಲ್‌ಗೆ ಎಚ್ಚರಿಕೆ ನೀಡಿದ್ದಾರೆ.
ಮೂರನೆ ಹಂತದ ಕೋಕ್ ಘಟಕದಿಂದ ದೊಡ್ಡ ಪ್ರಮಾಣದ ಮಾಲಿನ್ಯಯುಕ್ತ ಅಶುದ್ಧ ನೀರು ಕಂಪೌಂಡ್ ದಾಟಿ ಹೊರಹರಿದಿದೆ. ಊರಿನ ಮಳೆನೀರು ಹರಿಯುವ ತೋಡುಗಳ ಮೂಲಕ ನೀರಿನ ಮೂಲಗಳಾದ ಹಳ್ಳ, ಕೆರೆಗಳಿಗೆ ಸೇರಿದೆ. ಕೆಲವು ಕಡೆ ಅಂತರ್ಜಲದ ಮೂಲಕ ಬಾವಿ ನೀರು ಕಲುಷಿತಗೊಂಡಿದೆ. ಇಂದು ಬೆಳಗ್ಗೆ ನಾಗರಿಕ ಹೋರಾಟ ಸಮಿತಿ ಸದಸ್ಯರ ಗಮನಕ್ಕೆ ಈ ಸೋರಿಕೆ ಕಂಡು ಬಂದಿದ್ದು, ಮಾಲಿನ್ಯ ನಿಯಂತ್ರಣ ಮಂಡಲಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮಾಲಿನ್ಯ ನಿಯಂತ್ರಣ ಮಂಡಲಿ ಅಧಿಕಾರಿ ರಾಜಶೇಖರ್ ಪುರಾಣಿಕ್, ಎಂಆರ್‌ಪಿಎಲ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ತಾಲೂಕು ಪಂಚಾಯತ್ ಸದಸ್ಯ ಬಿ.ಎಸ್.ಬಶೀರ್, ಪಂಚಾಯತ್ ಉಪಾಧ್ಯಕ್ಷ ಸಂಸುದ್ದೀನ್, ಪಂಚಾಯತ್ ಸದಸ್ಯರಾದ ಅಬೂಬಕರ್ ಬಾವ, ಮೊಯ್ದಿನ್ ಶರೀಫ್ ಸಹಿತ ಹೋರಾಟ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇತ್ತೀಚೆಗಷ್ಟೆ ದೀರ್ಘಾವಧಿ ಹೋರಾಟದ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಸಂಬಂಧಿಸಿ ಸರಕಾರಿ ಅದೇಶ ಪಡೆದು ನಿಟ್ಟುಸಿರು ಬಿಟ್ಟಿದ್ದ ಗ್ರಾಮಸ್ಥರಲ್ಲಿ ಇಂದಿನ ಬೆಳವಣಿಗೆ ಮತ್ತೆ ಆತಂಕಕ್ಕೆ ಕಾರಣವಾಗಿದೆ.
ಮಾಲಿನ್ಯಯುಕ್ತ ನೀರನ್ನು ಬೇಜವಾಬ್ದಾರಿತನದಿಂದ ಹೊರಬಿಟ್ಟಿರುವ ಎಂಆರ್‌ಪಿಎಲ್ ಕಂಪೆನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದ್ದಾರೆ. ಅಲ್ಲದೆ, ಸರಕಾರಿ ಆದೇಶದಂತೆ ತೆಗೆದುಕೊಂಡಿರುವ ಪರಿಹಾರ ಕ್ರಮಗಳು ತಕ್ಷಣವೇ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಮತ್ತೊಂದು ಸುತ್ತಿನ ಹೋರಾಟ ಕೈಗೆತ್ತಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.