ಪುರಭವನದ ಬಳಿ ಸ್ಕೈವಾಕ್ ನಿರ್ಮಿಸಲು ನಿರ್ಧಾರ: ಶಾಸಕ ಲೋಬೊ
ಮಂಗಳೂರು, ಆ.5: ನಗರದಲ್ಲಿ ವಾಹನ ದಟ್ಟಣೆ ಹಾಗೂ ಜನಸಂದಣಿಯಿಂದಾಗಿ ಸಂಚಾರದ ಅಡಚಣೆಯು ನಿತ್ಯದ ಸಮಸ್ಯೆಯಾಗಿದ್ದು, ಇದರಿಂದ ಸಾರ್ವಜನಿಕರು ಬಹಳಷ್ಟು ತೊಂದರೆಗೀಡಾಗಿದ್ದಾರೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ.
ಅವರು ಇಂದು ಪುರಭವನದ ಬಳಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶೀಘ್ರದಲ್ಲೇ ನಿರ್ಮಾಣವಾಗಲಿರುವ ಸ್ಕೈವಾಕ್‌ಗೆ ಸ್ಥಳದ ಪರಿಶೀಲನೆ ಮಾಡಿ ಮಾತನಾಡಿದರು.
ನಗರದ ಪುರಭವನದ ಬಳಿಯಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಗೆ ಆಧುನಿಕ ಮಾದರಿಯಲ್ಲಿ ಸ್ಕೈವಾಕ್ ನಿರ್ಮಿಸಲು ಮುಂದಾಗಿದೆ. ಈ ಸ್ಕೈ ವಾಕ್‌ನಿಂದಾಗಿ ಪಾದಾಚಾರಿಗಳಿಗೆ ಮುಖ್ಯ ರಸ್ತೆಯನ್ನು ದಾಟಲು ಬಹಳಷ್ಟು ಪ್ರಯೋಜನಕಾರಿಯಾಗುತ್ತದೆ. ಅದಲ್ಲದೇ ಈ ಸ್ಕೈವಾಕ್‌ನ ಜೊತೆಗೆ ಎಸ್ಕಲೇಟರ್ ವ್ಯವಸ್ಥೆಯನ್ನು ಕೂಡಾ ಮಾಡಲು ಚಿಂತಿಸಲಾಗಿದೆ. ಹೊಸದಿಲ್ಲಿಯಲ್ಲಿ ಇಂತಹ ಮಾದರಿಯ ಸ್ಕೈವಾಕ್ ಇದೆ. ಅದೇ ರೀತಿ ಮಂಗಳೂರಿನಲ್ಲಿ ಕೂಡಾ ಇದೇ ಮಾದರಿಯಲ್ಲಿ ಮಾಡಲು ಆಲೋಚಿಸಲಾಗಿದೆ. ಇಂತಹ ಆಧುನಿಕ ಸ್ಕೈವಾಕ್ ನಿರ್ಮಾಣಕ್ಕೆ ಸುಮಾರು ರೂ. 1.50 ಕೋಟಿ ರೂ. ಬೇಕಾಗಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷ ಲ್ಯಾನ್ಸಿಲಾಟ್ ಪಿಂಟೊ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಸಹಾಯಕ ಕಾರ್ಯಪಾಲಕ ಅಭಿಯಂತರ ನಿಂಗ ಶೆಟ್ಟಿ, ವಲಯಾಧಿಕಾರಿ ಹರಿಕಾಂತ, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ, ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಯಶವಂತ್, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.