×
Ad

ಸೌದಿ: ಭಾರತೀಯರ ಬವಣೆ ನೀಗಿಸಲು ಬಿಕ್ಕಟ್ಟು ನಿರ್ವಹಣೆ ತಂಡ ರಚನೆ

Update: 2016-08-05 20:58 IST

ಹೊಸದಿಲ್ಲಿ,ಆ.5: ಉದ್ಯೋಗ ಕಳೆದುಕೊಂಡಿರುವ ಸಾವಿರಾರು ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಬಿಕ್ಕಟ್ಟು ನಿರ್ವಹಣೆ ತಂಡವೊಂದನ್ನು ಸೌದಿ ಅರೇಬಿಯಾ ರಚಿಸಿದೆ. ಇದೇ ವೇಳೆ ಕಾರ್ಮಿಕರ ವೇತನ ಬಾಕಿಗಳನ್ನು ಪರಿಶೀಲಿಸಲು ಪ್ರತ್ಯೇಕ ಸಮಿತಿಯೊಂದನ್ನು ನೇಮಕಗೊಳಿಸಲಾಗಿದೆ.
ಈ ಮಾನವೀಯ ಸಮಸ್ಯೆಯನ್ನು ಅತ್ಯಂತ ಕಾಳಜಿಯಿಂದ ನಿರ್ವಹಿಸಲಾಗುತ್ತಿದೆ ಮತ್ತು ತಾಯ್ನಿಡಿಗೆ ಮರಳಲು ಬಯಸುವ ಕಾರ್ಮಿಕರ ನಿರ್ಗಮನ ಪ್ರಕ್ರಿಯೆಯನ್ನು ತ್ವರಿತಗೊಳಿಸಿರುವುದಾಗಿ ಸೌದಿ ಸರಕಾರವು ಭಾರತಕ್ಕೆ ತಿಳಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ ಸ್ವರೂಪ್ ತಿಳಿಸಿದರು.
ಎಷ್ಟು ಭಾರತೀಯರು ಸ್ವದೇಶಕ್ಕೆ ಮರಳಲು ಬಯಸಿದ್ದಾರೆ ಮತ್ತು ಬೇರೆ ಕಂಪನಿಗಳಲ್ಲಿ ಉದ್ಯೋಗಗಳನ್ನು ಕಂಡುಕೊಳ್ಳಲು ಎಷ್ಟು ಜನ ಅಲ್ಲೇ ಉಳಿಯಲು ಇಚ್ಛಿಸುತ್ತಾರೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬರಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು.
ವೇತನಬಾಕಿ,ಉದ್ಯೋಗಾವಕಾಶವಿರುವ ಬೇರೆ ಕಂಪನಿಗಳಿಗೆ ವರ್ಗಾವಣೆ,ಸ್ವದೇಶಕ್ಕೆ ವಾಪಸಾತಿ ಮತ್ತು ವಿವಿಧ ಕಾರ್ಮಿಕ ಶಿಬಿರಗಳಲ್ಲಿಯ ವಾಸಸ್ಥಿತಿ ಇವು ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳಾಗಿವೆ ಎಂದು ಅವರು ತಿಳಿಸಿದರು.
  ಈ ಮೊದಲು ಸೌದಿ ಕಾನೂನಿನಂತೆ ಕಾರ್ಮಿಕರು ಕಾರ್ಮಿಕ ನ್ಯಾಯಾಲಯಗಳಿಗೆ ಹೋಗುತ್ತಿದ್ದರು. ಈಗ ಸೌದಿ ಅರೇಬಿಯಾದ ಕಾರ್ಮಿಕ ಸಚಿವಾಲಯವು ಕಾರ್ಮಿಕರ ದೂರುಗಳನ್ನು ಪರಿಶೀಲಿಸಲು ಪ್ರತ್ಯೇಕ ಸಮಿತಿಯನ್ನು ರಚಿಸಿದೆ ಎಂದ ಸ್ವರೂಪ್, ಕಾರ್ಮಿಕ ಸಚಿವಾಲಯವು ವಕೀಲರೋರ್ವರನ್ನು ನೇಮಿಸಲಿದೆ ಮತ್ತು ಈ ಬಗ್ಗೆ ನಿಖರವಾದ ವಿಧಿವಿಧಾನ ನಮಗೆ ಮುಂದಿನ 2-3 ದಿನಗಳಲ್ಲಿ ತಿಳಿಯಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News