ಮದೀನಾ ತಲುಪಿದ ಹಜ್ ಯಾತ್ರಿಕರ ಎರಡನೆ ತಂಡ
ಮಂಗಳೂರು, ಆ.5: ಕೇಂದ್ರ ಹಜ್ ಸಮಿತಿ ವತಿಯಿಂದ ಹಜ್ ಯಾತ್ರೆ ಕೈಗೊಂಡಿರುವ ಯಾತ್ರಿಕರ ಪೈಕಿ ಎರಡನೆ ತಂಡ ಇಂದು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ್ದು, ಸಂಜೆ ಭಾರತೀಯ ಕಾಲಮಾನ 7:25ಕ್ಕೆ ಮದೀನಾದಲ್ಲಿ ಭೂಸ್ಪರ್ಶ ಮಾಡಿದೆ.
ಎರಡನೆ ತಂಡದಲ್ಲಿ 78 ಮಂದಿ ಪುರುಷರು ಹಾಗೂ 76 ಮಂದಿ ಮಹಿಳೆಯರ ಸಹಿತ ಒಟ್ಟು 154 ಮಂದಿ ಇದ್ದು, ಬೆಳಗ್ಗೆ 12.05 ಗಂಟೆಗೆ ವಿಶೇಷ ವಿಮಾನ ಏರ್ ಇಂಡಿಯಾದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಮಾರ್ಗ ಮಧ್ಯೆ ಶಾರ್ಜಾದಲ್ಲಿ ಇಂಧನ ತುಂಬಿಸಿ ಹಾರಾಟ ನಡೆಸಿದ ಏರ್ ಇಂಡಿಯಾವು ನಿರೀಕ್ಷೆಯಂತೆ ನಿಗದಿತ ಸಮಯದಲ್ಲಿ ಮದೀನಾದಲ್ಲಿ ಭೂಸ್ಪರ್ಶ ಮಾಡಿದೆ.
ತಡ ರಾತ್ರಿ ತಲುಪಿದ ಪ್ರಥಮ ತಂಡ
ಗುರುವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಟಿದ್ದ ಹಜ್ ಯಾತ್ರಿಕರ ಪ್ರಥಮ ತಂಡವು ಶುಕ್ರವಾರ ಮುಂಜಾನೆ ಭಾರತೀಯ ಕಾಲಮಾನ 1:15ಕ್ಕೆ ಮದೀನಾದಲ್ಲಿ ವಿಮಾನ ನಿಲ್ದಾಣದಲ್ಲಿ ಭೂ ಸ್ಪರ್ಶ ಮಾಡಿತ್ತು.
ಬೆಳಗ್ಗೆ 11:05 ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸಿದ್ದ ಪ್ರಥಮ ತಂಡವು ಇಂಧನ ತುಂಬಿಸುವ ಸಲುವಾಗಿ ಶಾರ್ಜಾದಲ್ಲಿ ಭೂ ಸ್ಪಶರ್ ಮಾಡಿತ್ತು. ಕೇವಲ 20 ನಿಮಿಷಗಳಲ್ಲೇ ಹಾರಾಟ ಮಾಡಬೇಕಿದ್ದ ವಿಮಾನವು ಹವಾಮಾನ ವೈಪರೀತ್ಯದಿಂದಾಗಿ 5 ತಾಸುಗಳ ಕಾಲ ಶಾರ್ಜಾದಲ್ಲೇ ಬಾಕಿಯಾಗಿತ್ತು. ಕೊನೆಗೂ ಟೇಕ್‌ಓವರ್ ಮಾಡಿದ ವಿಮಾನವು 10:45ಕ್ಕೆ (ಭಾರತೀಯ ಕಾಲಮಾನ ಇಂದು ಮುಂಜಾನೆ 1:15) ಮದೀನಾ ತಲುಪಿದೆ.