×
Ad

ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮ

Update: 2016-08-05 21:57 IST

ಮಂಗಳೂರು, ಆ. 5: ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಇಂದು ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯ ಸಾರ್ವಜನಿಕರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವು ಪ್ರತಿ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ 11 ಗಂಟೆಯ ವರೆಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಮಿಷನರ್ ಕಚೇರಿ ಪ್ರಕಟನೆ ತಿಳಿಸಿದೆ.

ಪೊಲೀಸ್ ಆಯುಕ್ತ ಚಂದ್ರಶೇಖರ್ ಎಂ. ಅವರು ಇಂದು ಒಟ್ಟು 24 ಕರೆಗಳನ್ನು ಸ್ವೀಕರಿಸಿ ಸಾರ್ವಜನಿಕರ ಸಮಸ್ಯೆ, ಸಲಹೆ ಗಳಿಗೆ ಸ್ಪಂದಿಸಿದರು. ಇಂದು ಸ್ವೀಕರಿಸಿದ ಒಟ್ಟು ಕರೆಗಳಲ್ಲಿ 10 ಪ್ರಶ್ನೆಗಳು ಟ್ರಾಫಿಕ್ ಸಮಸೈಗೆ ಸಂಬಂಧಿಸಿದ್ದಾಗಿದ್ದವು. ಇವುಗಳಲ್ಲಿ ಕುಲಶೇಖರ, ಕುಡುಪು ದೇವಸ್ಥಾನದ ಬಳಿ ನಗರದ ಸಿಟಿ ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಲು ಬಸ್ಸನ್ನು ರಸ್ತೆ ಬದಿಯಲ್ಲಿ ನಿಲ್ಲಿಸದೇ, ಮಧ್ಯ ಭಾಗದಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವ ಬಗ್ಗೆ, ಕದ್ರಿ ಕಂಬಳಕ್ಕೆ ಹೋಗುವ ಭಾರತ್ ಬೀಡಿ ಕಚೇರಿ ಎದುರುಗಡೆ ಟ್ರಾಫಿಕ್ ಬ್ಲಾಕ್ ಆಗಿ ವಾಹನ ಸಂಚಾರ ಅಡ್ಡಿಯಾಗುವ ಬಗ್ಗೆ ಪೊಲೀಸ್ ಆಯುಕ್ತರ ಗಮನ ಸೆಳೆಯಲಾಯಿತು. ಕಿನ್ನಿಗೋಳಿಯ ಬಸ್ಸು ನಿಲ್ಡಾಣದ ಬಳಿ ವಾಹನಗಳನ್ನು ಸರಿಯಾಗಿ ಪಾರ್ಕಿಂಗ್ ಮಾಡುವ ಬಗ್ಗೆ ಅಲ್ಲಿಯ ಪಂಚಾಯಯತ್‌ನವರು ಪೊಲೀಸರೊಂದಿಗೆ ಸ್ಪಂದಿಸುತ್ತಿಲ್ಲವೆಂದು ದೂರಿದರು.

ಸುರತ್ಕಲ್ ಎಂ.ಆರ್.ಪಿ.ಎಲ್ ಕಾರ್ಗೋಗೇಟ್ ಬಳಿ ಪೊಲೀಸರು ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸಿರುವ ಬಗ್ಗೆ ಸಾರ್ವಜನಿಕರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಇರಿಸಿ ಅಫಘಾತವಾಗುವುದನ್ನು ತಪ್ಪಿಸಿರುವ ಬಗ್ಗೆ ಅಭಿನಂದನೆಯನ್ನು ಸಲ್ಲಿಸಿದ್ದು, ಖಾಸಗಿ ಬಸ್ಸುಗಳ ಚಾಲಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಸಲಹೆ ನೀಡಿದರು. ಅಲ್ಲದೆ, ಬಸ್ಸುಗಳಲ್ಲಿ ಕರ್ಕಶ ಹಾರ್ನ್‌ಗಳನ್ನು ಬಳಸದಂತೆ ಕ್ರಮ ಕೈಗೊಳ್ಳುವುವಂತೆ ಕಮಿಷನರ್‌ಗೆ ಮನವಿ ಮಾಡಲಾಯಿತು.

ಇನ್ನೊಬ್ಬರು ಫೋನ್ ಮಾಡಿ ಎಕ್ಕೂರಿನ ಬಳಿ ಶಾಲಾ ವಾಹನಗಳು ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದು, ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ. ಅನಂತರ ಹಿರಿಯ ನಾಗರಿಕರೊಬ್ಬರು ಕರೆ ಮಾಡಿ ಕೊಟ್ಟಾರ ಚೌಕಿಯ ಪ್ಲೈ-ಒವರ್ ಬ್ರಿಡ್ಜ್ನಲ್ಲಿ ಯಾವಾಗಲೂ ಬ್ಲಾಕ್ ಆಗುತ್ತಿದ್ದು, ಕುಂಟಿಕಾನ ಎ.ಜೆ.ಆಸ್ಪತ್ರೆಯಿಂದ ಕೊಟ್ಟಾರ ಚಾಕಿಯ ವರೆಗೆ ಸಾರ್ವಜನಿಕರಿಗೆ ನಡೆದಾಡಲು ಫುಟ್ಪಾತ್ ವ್ಯವಸ್ಥೆ, ಬಸ್ಸು ತಂಗುದಾಣ ಇಲ್ಲದೇ ಇರುವ ಬಗ್ಗೆ ದೂರಿದ್ದಾರೆ.

ಈ ದಿನ 5 ಮಂದಿ ನಾಗರಿಕರು ಮಾದಕ ದ್ರವ್ಯ, ಅಕ್ರಮ ಮದ್ಯ ಮಾರಾಟ, ಜೂಜಾಟ ಮತ್ತು ವೈದ್ಯರಿಗೆ ಕೆಲವು ಭಾಗಗಳಲ್ಲಿ ರೋಗಿಗಳ ಮತ್ತು ರೋಗಿಗಳ ಸಂಬಂಧಿಕರು ದಮ್ಕಿ ಹಾಕುತ್ತಿರುವ ಬಗ್ಗೆ ದೂರಿದ್ದಾರೆ. ಕರೆ ಮಾಡಿದ 4 ಮಂದಿ ಈಗಾಗಲೇ ಠಾಣೆಯಲ್ಲಿ ದಾಖಲಾದ ಪ್ರಕರಣದ ಬಗ್ಗೆ ಮಾಹಿತಿ ನೀಡಿ, ತನಿಖೆಯನ್ನು ಚುರುಕು ಗೊಳಿಸುವಂತೆ ಕೋರಿದ್ದಾರೆ.

ಕರೆ ಮಾಡಿದವರಲ್ಲಿ ಉಳಿದವರು ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಉತ್ತಮ ಕಾರ್ಯ ಕೈಗೊಂಡಿರುವ ಬಗ್ಗೆ ಕಮೀಷನರೇಟ್‌ನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ. ಪೊಲೀಸ್ ಸಿಬ್ಬಂದಿ ವಸತಿಗೃಹ ಸುಧಾರಣೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವಂತೆ ಕೋರಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News