ಕರಿಯ ಯುವಕನ ಹತ್ಯೆ ವಿಡಿಯೋ ಬಹಿರಂಗಗೊಂಡಲ್ಲಿ ಹಿಂಸಾಚಾರದ ಸಾಧ್ಯತೆ: ಶಿಕಾಗೋ ಪೊಲೀಸರ ಎಚ್ಚರಿಕೆ
ಶಿಕಾಗೋ,ಆ.5: ಕರಿಯ ಯುವಕನೋರ್ವ ಪೊಲೀಸ್ ಅಧಿಕಾರಿಯಿಂದ ಬೆನ್ನಿಗೆ ಗುಂಡೇಟು ತಿಂದು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದ ವೀಡಿಯೊವನ್ನು ಬಿಡುಗಡೆಗೊಳಿಸಲು ಇಲಾಖೆಯು ಮುಂದಾಗಿದೆ. ವಿಡಿಯೋ ಬಿಡುಗಡೆಯಾದಲ್ಲಿ ನಾಗರಿಕ ಅಶಾಂತಿ ಸೃಷ್ಟಿಯಾಗುವ ಮತ್ತು ಪೊಲೀಸರ ವಿರುದ್ಧ ಹಿಂಸಾಚಾರ ನಡೆಯುವ ಸಾಧ್ಯತೆ ಬಗ್ಗೆ ಶಿಕಾಗೋ ಪೊಲೀಸರು ರಾಷ್ಟ್ರವ್ಯಾಪಿ ಎಚ್ಚರಿಕೆಯನ್ನು ಹೊರಡಿಸಿದ್ದಾರೆ.
ಕಳೆದ ವಾರ ಕಾರೊಂದನ್ನು ಕದಿಯುತ್ತಿದ್ದ ಶಂಕೆಯ ಮೇರೆಗೆ 18ರ ಹರೆಯದ ಪಾಲ್ ಓ’ನೀಲ್‌ಗೆ ಗುಂಡು ಹಾರಿಸುವಾಗ ಪೊಲೀಸ್ ಅಧಿಕಾರಿಯು ಇಲಾಖಾ ನೀತಿಯನ್ನು ಉಲ್ಲಂಘಿಸಿದ್ದ ಎಂದು ಶಿಕಾಗೋ ಪೊಲೀಸರು ಹೊರಡಿಸಿರುವ ಬುಲೆಟಿನ್ ಹೇಳಿದೆ.
ವೀಡಿಯೊವನ್ನು ಆಘಾತಕಾರಿ ಮತ್ತು ಕಳವಳಕಾರಿ ಎಂದು ಹೇಳಿಕೆಯೊಂದರಲ್ಲಿ ಬಣ್ಣಿಸಿರುವ ಶಿಕಾಗೋ ಪೊಲೀಸ್ ಮೇಲುಸ್ತುವಾರಿ ಮಂಡಳಿಯ ಮುಖ್ಯಸ್ಥೆ ಶರೋನ್ ಫೇರ್ಲೀ ಅವರು, ನೀಲ್ ಕುಟುಂಬಕ್ಕೆ ಮತ್ತು ಆತನ ಸ್ನೇಹಿತರಿಗೆ ಸಂತಾಪಗಳನ್ನು ತಿಳಿಸಿದ್ದಾರೆ. ನಗರದ ಪಾರದರ್ಶಕತೆ ನೀತಿಯಲ್ಲಿ ತಿಳಿಸಿರುವಂತೆ 60 ದಿನಗಳಲ್ಲಿ ವೀಡಿಯೊ ಬಿಡುಗಡೆಗೊಳ್ಳಲಿದೆಯಾದರೂ,ತನಿಖೆಗೆ ಅಡ್ಡಿಯಾಗದಂತೆ ಅದನ್ನು ಬಿಡುಗಡೆಗೊಳಿಸಬಹುದಾಗಿದೆ ಎಂದಿದ್ದಾರೆ.
ಬಾಡಿ ಮತ್ತು ಡ್ಯಾಷ್‌ಕ್ಯಾಮ್ ವೀಡಿಯೊ ತುಣುಕುಗಳನ್ನು ಪೊಲೀಸ್ ಇಲಾಖೆಯು ಬಿಡುಗಡೆಗೊಳಿಸಿದೆ.
ಆರೋಪಿ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದಾಖಲಿಸಿರುವ ನೀಲ್ ಕುಟುಂಬವು ವೀಡಿಯೊ ಸಾರ್ವಜನಿಕವಾಗಿ ಬಿಡುಗಡೆಗೊಳ್ಳುವ ಮುನ್ನ ಅದನ್ನು ವೀಕ್ಷಿಸುವ ನಿರೀಕ್ಷೆಯಿದೆ.
ಶಂಕಿತ ಕಾರು ಕಳ್ಳ ನೀಲ್‌ನನ್ನು ಬೆನ್ನಟ್ಟಿದ್ದ ಪೊಲೀಸ್ ಅಧಿಕಾರಿಗಳು ಆತನ ಮೇಳೆ ಗುಂಡು ಹಾರಿಸಿದ್ದು,ಆತ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.
ನೀಲ್‌ಗೆ ಮಾರಣಾಂತಿಕವಾಗಿ ಗುಂಡು ಹಾರಿಸಿದ್ದ ಅಧಿಕಾರಿ ತನ್ನ ದೇಹಕ್ಕೆ ಅಳವಡಿಸಿಕೊಂಡಿದ್ದ ಕ್ಯಾಮರಾ(ಬಾಡಿ ಕ್ಯಾಮರಾ) ಆತ ಗುಂಡು ಹಾರಿಸುವಾಗ ಅದನ್ನು ದಾಖಲಿಸಿಕೊಂಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ಬಳಿಕ ಮೂವರು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಗುಂಡು ಹಾರಾಟದ ಬಗ್ಗೆ ಶಿಕಾಗೋ ಎಸ್‌ಪಿ ಎಡ್ಡಿ ಜಾನ್ಸನ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.