ಗುಜರಾತ್ ನಿಯೋಜಿತ ಮುಖ್ಯಮಂತ್ರಿಯ ವಿದೇಶಿ ಮೂಲ !

Update: 2016-08-05 17:44 GMT

# ಇದೇ ಮೊದಲ ಬಾರಿ ಶಾಸಕ 

# ಕರ್ನಾಟಕ ರಾಜ್ಯಪಾಲರಿಗೂ ಇವರಿಗೂ ಏನು ನಂಟು ?

# ಇವರು ಗುಜರಾತ್ ನ ಸದಾನಂದ ಗೌಡ ! 

ಅಹ್ಮದಾಬಾದ್, ಆ. 5 : ಗುಜರಾತ್ ನ ನೂತನ ಮುಖ್ಯಮಂತ್ರಿಯಾಗಲಿರುವ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯ್ ರೂಪಾನಿ ಅವರೂ ವಿದೇಶಿ ಮೂಲದಿಂದ ಬಂದವರು !  ಕಾರಣ ಅವರು ಹುಟ್ಟಿದ್ದು ಮಯನ್ಮಾರ್ ನ ರಂಗೂನ್ ನಲ್ಲಿ ! 

1956 ರಲ್ಲಿ ರಂಗೂನ್ ನಲ್ಲಿ ಜನಿಸಿದ ರುಪಾನಿ ಅವರ ತಂದೆ ರಮಣಿಕ್ ಲಾಲ್ ರೂಪಾನಿ ಹಾಗು ತಾಯಿ ಮಾಯಾಬೆನ್ . ಬಳಿಕ ಗುಜರಾತ್ ನ ರಾಜ್ ಕೋಟ್ ನಲ್ಲಿ ಬೆಳೆದು ಆರೆಸ್ಸೆಸ್ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದರು. ಜೈನ ಸಮುದಾಯದಿಂದ ಬಂದಿರುವ ರೂಪಾನಿ ಅಮಿತ್ ಷಾ ಅವರ ಅತ್ಯಂತ ಆಪ್ತರು. ರಾಜ್ಯ ಸಭಾ ಸದಸ್ಯರಾಗಿ, ಗುಜರಾತ್ ಪ್ರವಾಸೋದ್ಯಮ ನಿಗಮದ ಅಧ್ಯಕ್ಷರಾಗಿ, ಗುಜರಾತ್ ಮುನಿಸಿಪಲ್ ಫೈನಾನ್ಸ್ ಬೋರ್ಡ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ರೂಪಾನಿ ಅವರು ಇದೇ ಮೊದಲ ಬಾರಿ ಶಾಶಕರಾಗಿ ಆಯ್ಕೆಯಾಗಿದ್ದಾರೆ. ಅದೂ  2014 ರಲ್ಲಿ ವಜು ಭಾಯ್ ವಾಲಾ ಅವರು ಕರ್ನಾಟಕದ ರಾಜ್ಯಪಾಲರಾಗಿ ಆಯ್ಕೆಯಾದ ಬಳಿಕ ಅವರು ತೆರವುಗೊಳಿಸಿದ ರಾಜ್ ಕೋಟ್ ಪಶ್ಚಿಮ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ರೂಪಾನಿ ಆಯ್ಕೆಯಾದರು. ಬಳಿಕ ಆನಂದಿಬೆನ್ ಸರಕಾರದಲ್ಲಿ ಸಾರಿಗೆ ಸಚಿವರಾದ ರೂಪಾನಿ ಈ ವರ್ಷ ಫೆಬ್ರವರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದರು. ದಕ್ಷ ಆಡಳಿತಗಾರ ಎಂದು ಹೆಸರು ಮಾಡಿರುವ ರೂಪಾನಿ ಪ್ರಧಾನಿ ಮೋದಿ ಹಾಗು ಅಮಿತ್ ಷಾ ಅವರೊಂದಿಗಿನ ಆತ್ಮೀಯತೆಯಿಂದ ಘಟಾನುಘಟಿಗಳನ್ನು ಹಿಂದಿಕ್ಕಿ ಮುಖ್ಯಮಂತ್ರಿ ಗಾದಿ ಪಡೆದಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದಾರೆ.  ಆಗಸ್ಟ್ 2 ರಂದು ತಮ್ಮ 60 ನೇ ಹುಟ್ಟುಹಬ್ಬ ಆಚರಿಸಿದ ರೂಪಾನಿಗೆ ಪಕ್ಷ ಬಹುದೊಡ್ಡ ಉಡುಗೊರೆಯನ್ನೇ ನೀಡಿದೆ. 

ಸಂಪೂರ್ಣ ಅಲ್ಲದಿದ್ದರೂ ರೂಪಾನಿ ಅವರ ರಾಜಕೀಯ ಪಯಣ ನಮ್ಮ ಡಿ ವಿ ಸದಾನಂದ ಗೌಡ ಅವರ ರಾಜಕೀಯ ಬೆಳವಣಿಗೆಗೆ ಹಲವು ರೀತಿಯಲ್ಲಿ ಸಾಮ್ಯತೆ ಹೊಂದಿದೆ. ಸದಾನಂದ ಗೌಡರು ಸಂಸದರಾಗಿ, ಶಾಸಕರಾಗಿ, ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರೂ ಮಂತ್ರಿಯಾಗಿರಲಿಲ್ಲ. ಯಡಿಯೂರಪ್ಪನವರಿಗೆ ಆಪ್ತರಾಗಿದ್ದರು. ರಾಜ್ಯ ಹಾಲು ಮಹಾಮಂಡಲದ ( ಕೆ ಎಂ ಎಫ್ ) ಅಧ್ಯಕ್ಷತೆ ಮೇಲೆ ಅವರ ಕಣ್ಣಿತ್ತು. ಅದೂ ಅವರಿಗೆ ಸಿಕ್ಕಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಅವರ ಅದೃಷ್ಟ ಖುಲಾಯಿಸಿತು. ಯಡಿಯೂರಪ್ಪ ಅನಿವಾರ್ಯವಾಗಿ ಸಿ ಎಂ ಹುದ್ದೆ ಬಿಡಲೇಬೇಕಾದಾಗ ಸದಾನಂದ ಗೌಡ ಅವರ ಹೆಸರು ಸೂಚಿಸಿದರು. ಸ್ಪರ್ಧೆಯಲ್ಲಿದ್ದ ಅತಿರಥ ಮಹಾರಥರೆಲ್ಲ ಬದಿಗೆ ಸರಿದರು. ಅಷ್ಟೇನೂ ರಾಜಕೀಯವಾಗಿ ಪ್ರಬಲರಲ್ಲದ, ಆದರೆ ಪಕ್ಷಕ್ಕೆ ನಿಷ್ಠರಾಗಿದ್ದ ಗೌಡರ ಮೇಲೆ ಪಕ್ಷ ನಂಬಿಕೆ ಇಟ್ಟಿತು. ಕೆ ಎಂ ಎಫ್ ಪಟ್ಟ ಕೇಳಿದ್ದವರಿಗೆ ರಾಜ್ಯದ ಮುಖ್ಯಮಂತ್ರಿ ಪಟ್ಟ ಸಿಕ್ಕಿತು ! 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News