×
Ad

100 ರೂಪಾಯಿ ಲಂಚ ಕೊಡದ್ದಕ್ಕೆ ಇಬ್ಬರು ಕಾರ್ಮಿಕರನ್ನು ಕೊಂದೇ ಬಿಟ್ಟ ಪೊಲೀಸರು

Update: 2016-08-06 08:41 IST

ಆಗ್ರಾ, ಆ.6: ಕಾನ್ಪುರದಲ್ಲಿ ದಲಿತ ಯುವಕನೊಬ್ಬನ ಶಂಕಿತ ಲಾಕಪ್ ಡೆತ್ ಪ್ರಕರಣ, 15 ರೂಪಾಯಿ ಸಾಲದ ವಿವಾದದಲ್ಲಿ ದಂಪತಿ ಹತ್ಯೆ ಘಟನೆಗಳು ಮಾಸುವ ಮುನ್ನವೇ, 100 ರೂಪಾಯಿ ಲಂಚ ನೀಡಲು ನಿರಾಕರಿಸಿದ ಇಬ್ಬರು ಕಾರ್ಮಿಕರನ್ನು ಪೊಲೀಸರು ಹೊಡೆದು ಕೊಂದ ಪೈಶಾಚಿಕ ಘಟನೆ ಮೈನ್‌ಪುರಿ ಜಿಲ್ಲೆಯಿಂದ ವರದಿಯಾಗಿದೆ.

ಜಿಲ್ಲೆಯ ಚೆಕ್‌ಪಾಯಿಂಟ್ ಪೊಲೀಸರು ಈ ಕೃತ್ಯ ಎಸಗಿದ್ದಾರೆ. ಆರಂಭದಲ್ಲಿ ಪೊಲೀಸರು ಈ ಕೃತ್ಯವನ್ನು ಒಪ್ಪಿಕೊಂಡಿರಲಿಲ್ಲ. ದಿಲೀಪ್ ಯಾದವ್ ಹಾಗೂ ಪಂಕಜ್ ಯಾದವ್ ಅವರು ಪೊಲೀಸರಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಕೆರೆಯಲ್ಲಿ ಮುಳುಗಿ ಸತ್ತಿದ್ದಾರೆ ಎಂದು ಕಥೆ ಕಟ್ಟಿದ್ದರು. ಆದರೆ ಯುವಕರ ಮರಣೋತ್ತರ ಪರೀಕ್ಷೆಯಲ್ಲಿ, ಇವರು ಮೃತಪಟ್ಟಿರುವುದು ನೀರಿನಲ್ಲಿ ಮುಳುಗಿದ ಕಾರಣದಿಂದ ಅಲ್ಲ, ಪೊಲೀಸರ ಹಲ್ಲೆಯಿಂದ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.

ಈ ಸಂಬಂಧ ಪೊಲೀಸರು ನಾಲ್ವರು ಸಹೋದ್ಯೋಗಿಗಳ ವಿರುದ್ಧ ಮತ್ತು ಇಬ್ಬರು ಗೃಹರಕ್ಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಲ್ಲರನ್ನೂ ಅಮಾನತುಗೊಳಿಸಲಾಗಿದೆ.

ನಾಲ್ವರು ಕಾರ್ಮಿಕರು ಇಟ್ಟಿಗೆ ತುಂಬಿದ್ದ ಟ್ರಕ್‌ನಲ್ಲಿ ಹೋಗುತ್ತಿದ್ದಾಗ ಶುಕ್ರವಾರ ಮುಂಜಾನೆ ಕೊಸ್ಮಾ ಚೆಕ್‌ಪೋಸ್ಟ್ ಬಳಿ ಪೊಲೀಸರು ಟ್ರಕ್ ತಡೆದರು. ಟ್ರಕ್ ಬಿಡಬೇಕಾದರೆ 100 ರೂಪಾಯಿ ಲಂಚ ಕೊಡುವಂತೆ ಪೊಲೀಸರು ಕೇಳಿದರು. ಆದರೆ ಚಾಲಕ ವಿನೇಶ್ ನಿರಾಕರಿಸಿದಾಗ, ಸಿಟ್ಟಿನಿಂದ ಪೊಲೀಸರು ಥಳಿಸಿದರು ಎಂದು ಮೃತ ಯುವಕರ ಸಂಬಂಧಿಕರು ದೂರಿನಲ್ಲಿ ವಿವರಿಸಿದ್ದಾರೆ.

ಚಾಲಕ ವಿನೇಶ್ ಹಾಗೂ ಇತರ ಇಬ್ಬರು ಕಾರ್ಮಿಕರಾದ ನೇತ್ರಪಾಲ್ ಹಾಗೂ ರಾಧಾಮೋಹನ್ ಎಂಬವರು ತಪ್ಪಿಸಿಕೊಂಡರು. ಆಗ ಪೊಲೀಸರು ದಿಲೀಪ್ ಹಾಗೂ ಪಂಕಜ್‌ನನ್ನು ಹಿಡಿದು ಅಮಾನುಷವಾಗಿ ಹಲ್ಲೆ ನಡೆಸಿದರು. ಬೆಳಗ್ಗೆ 10:30ರ ವೇಳೆಗೆ ಮೃತದೇಹಗಳು ಪಕ್ಕದ ಕೆರೆಂುಲ್ಲಿ ತೇಲುತ್ತಿದ್ದವು. ಪೊಲೀಸರು ಹೊಡೆದು ಸಾಯಿಸಿ ಕೆರೆಗೆ ತಳ್ಳಿದರು ಎಂದು ದೂರಲಾಗಿದೆ.

ಘಟನೆಯನ್ನು ಖಂಡಿಸಿ ಗ್ರಾಮಸ್ಥರು ರಸ್ತೆ ತಡೆ ಚಳವಳಿ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಆಗಮಿಸಿದ ಇಬ್ಬರು ಪೊಲೀಸರನ್ನೂ ಪ್ರತಿಭಟನಾಕಾರರು ಥಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News